‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ವಿಶೇಷ, ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 200 ದಿನಗಳಾದವು ಎಂದು ತಿಳಿಸಲು ಸಂತೋಷವಾಗುತ್ತಿದೆ.
ಈ ಇನ್ನೂರು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ಕರ್ನಾಟಕ ಕಹಳೆ ಡಾಟ್ ಕಾಮ್ ದಾಗಿದೆ.
ಇಂದಿನ ವಿಶೇಷ 200ನೇ “ಅನುದಿನ ಕವನ”ದ ಗೌರವಕ್ಕೆ ಸರಳ ಸಜ್ಜನಿಕೆಯ ಸಾಹಿತಿ, ಮನಂ ಕಾವ್ಯನಾಮದಲ್ಲಿ ಜನಪ್ರಿಯರಾಗಿರುವ ಶ್ರೀ ಮಳವಳ್ಳಿ ನಂಜುಂಡಸ್ವಾಮಿ ಐಪಿಎಸ್ (ಮನಂ) ಅವರ ‘ ಏಕಾಂತ ಕವಿತೆ ಪಾತ್ರವಾಗಿದೆ.
ಈ ‘ಏಕಾಂತ’ ಕವಿತೆಗೆ ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದ್ದಾರೆ ಸಂಗೀತ ಶಿಕ್ಷಕಿ ಹಗರಿಬೊಮ್ಮನಹಳ್ಳಿಯ ಶ್ರೀಮತಿ ಶಾರದ ಕೊಪ್ಪಳ ಅವರು….
(ಸಂಪಾದಕರು:ಕರ್ನಾಟಕ ಕಹಳೆ ಡಾಟ್ ಕಾಮ್)👇
ಏಕಾಂತ
ನನಗೆಂದೂ ಸಿಕ್ಕಿರಲಿಲ್ಲ ಇಂಥ ಏಕಾಂತ
ಮರಳುತಿರಲಿ ಆಗಾಗ ಇಂಥ ಏಕಾಂತ
ಒಬ್ಬಂಟಿಯಾಗಿ ಬಿಡಲಿಲ್ಲ ನನ್ನ ಏಕಾಂತ
ಚಿಂತನೆಗೆ ಚಾಲನೆ ನೀಡಿತು ಏಕಾಂತ
ನನ್ನ ನಾ ಅರಿಯಲು ತಿಳಿಸಿತು ಏಕಾಂತ
ಪರರ ಕುರಿತು ವಿವರಿಸಿತು ಏಕಾಂತ
ಮಂದಿ ನಡುವೆ ದೊರಕದ ಶಾಂತಿ ಏಕಾಂತ
ಸಕಲರೊಳು ಬಾಳು ನಡೆಸುವಲ್ಲಿರಲಿ ಏಕಾಂತ
ಬಾಳ ಗದ್ದಲದೊಳು ಕಾಣದ ಸತ್ಯ ಏಕಾಂತ
ಸತ್ಯ ತಿಳಿಯಲು ಬೇಕು ಏಕಾಂತ
ಜಗವನರಿತವನಿಗೆ ಎಲ್ಲೆಲ್ಲೂ ಸುಂದರ ಏಕಾಂತ
ಪರಮ ಸುಖದ ಸೋಪಾನ ಏಕಾಂತ….
-ಮನಂ
(ಎಂ. ನಂಜುಂಡಸ್ವಾಮಿ, ಐಪಿಎಸ್)
ಬೆಂಗಳೂರು
*****