ಅವಧಿಯ ಕಾವ್ಯ ಯಾನ ಆರಂಭ: ಜು.೨೪ರಂದು ಸಂಜೆ ಕಲಬುರ್ಗಿ ಕಾವ್ಯ ಸಂಭ್ರಮಕ್ಕೆ ಚಾಲನೆ

 

ಕಲಬುರಗಿ: ಸಾಹಿತ್ಯ, ಕಲೆ ಸಂಸ್ಕೃತಿ ಕೇಂದ್ರ ಬಿಂದುವಾದ ‘ಅವಧಿ’ ಅಂತರ್ಜಾಲ ತಾಣ ತನ್ನ ೧೫ನೆಯ ವಸಂತವನ್ನು ಆಚರಿಸುತ್ತಿದೆ. 15ನೇ ವಾರ್ಷಿಕೋತ್ಸವದ ಅಂಗವಾಗಿ ಇಡೀ ವರ್ಷ ಸಾಹಿತ್ಯ ಸಂಬಂಧಿ ಉತ್ಸವವನ್ನು ಆಚರಿಸುತ್ತಿದ್ದು ಕಲಬುರ್ಗಿಯಿಂದ ಶನಿವಾರ ಆರಂಭವಾಗಲಿದೆ.
ಕಲಬುರ್ಗಿ ಕವಿಗಳ, ಕವಿಗೋಷ್ಠಿಯ ಮೂಲಕ ‘ಕಾವ್ಯ ಯಾನ’ ಆರಂಭವಾಗಲಿದ್ದು ಇದು ನಾಡಿನಾದ್ಯಂತ ಸಂಚರಿಸಲಿದೆ. ಈ ಯಾನವನ್ನು ಖ್ಯಾತ ಸಾಹಿತಿ, ಪತ್ರಕರ್ತ ಜೋಗಿ ಅವರು ಉದ್ಘಾಟಿಸಲಿದ್ದಾರೆ. ಕಲಬುರ್ಗಿಯ ಈ ಕಾವ್ಯ ಯಾನವನ್ನು ಕಥೆಗಾರ ಸಂಧ್ಯಾ ಹೊನಗುಂಟಿಕರ್ ಅವರು ಸಂಘಟಿಸಿದ್ದು ಸಾಹಿತಿ, ಅಂಕಣಕಾರ ಮಹಿಪಾಲರೆಡ್ಡಿ ಮುನ್ನೂರ್ ಮತ್ತು ಪ್ರಭಾಕರ ಜೋಶಿ ಅವರು ಆಶಯ ಭಾಷಣ ಮಾಡಲಿದ್ದಾರೆ. ಹಿರಿಯ ಚಿಂತಕ ಡಾ ಬಸವರಾಜ ಕೊಡಗುಂಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
೨೪ ಜುಲೈ ೨೦೨೧, ಶನಿವಾರದಂದು ಸಂಜೆ ೫ ಗಂಟೆಗೆ ಈ ಕವಿಗೋಷ್ಠಿಯು ನೂತನ ಆಡಿಯೋ ವೇದಿಕೆಯಾದ ‘ಕ್ಲಬ್ ಹೌಸ್’ ನಲ್ಲಿ ಜರುಗಲಿದೆ ಎಂದು ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ತಿಳಿಸಿದ್ದಾರೆ..
ಶಂಕ್ರಯ್ಯ ಘಂಟಿ, ಪ್ರೇಮಾ ಹೂಗಾರ, ವಿಜಯಭಾಸ್ಕರ್ ರೆಡ್ಡಿ, ರುಕ್ಮಿಣಿ ನಾಗಣ್ಣವರ್, ದಸ್ತಗೀರ್ ಸಾಬ್ ನದಾಫ, ಜೋತ್ಸ್ನಾ ಹೇರೂರ್, ಸಂಗಮೇಶ ಸಜ್ಜನ್, ಕಾವ್ಯಶ್ರಿ ಮಹಾಗಾಂವಕರ್, ಸಿದ್ಧು ಛಲವಾದಿ, ಭೀಮರಾವ್ ಹೇಮನೂರ್ ಹಾಗೂ ಕಲಬುರ್ಗಿಯ ಆಸಕ್ತ ಕವಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
‘ಅವಧಿ’ ಅಂತರ್ಜಾಲ ತಾಣವು ಡಿಜಿಟಲ್ ಮಾಧ್ಯಮದಲ್ಲಿ ಸಾಹಿತ್ಯ ಪ್ರೀತಿಯನ್ನು ಹರಡಿದ ಕಾರಣಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅವಧಿಗೆ ಪ್ರಶಸ್ತಿ ನೀಡಿ ಗೌರವಿಸಿದೆ, ಅವಧಿ – ಈ ರೀತಿ ಪ್ರಶಸ್ತಿ ಪಡೆದ ಏಕೈಕ ಅಂತರ್ಜಾಲ ತಾಣ.

(ವರದಿ:ವಿಜಯಭಾಸ್ಕರ ರೆಡ್ಡಿ, ಸೇಡಂ)
*****