ಅನುದಿನ ಕವನ-೨೦೪, ಕವಿ: ಖಲೀಲ್ ಗಿಬ್ರಾನ್ (ಕನ್ನಡಕ್ಕೆ: ಸಿದ್ಧರಾಮ ಕೂಡ್ಲಿಗಿ) ಕವನದ ಶೀರ್ಷಿಕೆ:ನದಿಯು ಸಾಗರವಾಗುವುದು

👆ಖಲೀಲ್ ಗೀಬ್ರಾನ್

ನದಿಯು ಸಾಗರವಾಗುವುದು

ಸಾಗರವನ್ನು ಸೇರುವ ಮುಂಚೆ
ನದಿಯು ಹೆದರಿಕೆಯಿಂದ ನಡುಗುತ್ತಿತ್ತು

ತಾನು ನಡೆದು ಬಂದ ದಾರಿಯತ್ತ ಒಮ್ಮೆ ಅದು ತಿರುಗಿ ನೋಡಿತು
ಎತ್ತರದ ಬೆಟ್ಟಗಳಿಂದ, ಉದ್ದನೆಯ ದಾರಿ, ಅರಣ್ಯ, ಹಳ್ಳಿಗಳಿಂದ
ಉಕ್ಕಿ ಹರಿದುಬಂದದ್ದನ್ನು ನೆನೆಯಿತು

ಮತ್ತು ಅದು ಈಗ ಎದುರಿಗೆ ನೋಡಿತು
ಕಣ್ಣೆದುರಿಗಿನ ಸಾಗರ ವಿಶಾಲವಾಗಿತ್ತು
ಅಲ್ಲಿಯ ಪ್ರವೇಶವೆಂದರೆ
ಎಂದೆಂದಿಗೂ ಕಣ್ಮರೆಯಾಗುವುದಕ್ಕಿಂತ
ಹೆಚ್ಚಿನದೇನೂ ಅಲ್ಲಿರಲಿಲ್ಲ

ಆದರೆ ಅಲ್ಲಿ ಬೇರೆ ದಾರಿಯೇ ಇಲ್ಲ
ನದಿಯು ಮರಳಿ ಹೋಗಲಾಗುವುದಿಲ್ಲ

ಯಾರೂ ಮರಳಿ ಹೋಗಲಾಗುವುದಿಲ್ಲ
ಮರಳಿ ಹೋಗುವುದು ಎಂಬುದು ಅಸ್ತಿತ್ವದಲ್ಲಿ ಇಲ್ಲ

ನದಿಯು ಸಾಗರವನ್ನು ಪ್ರವೇಶಿಸುವಾಗ
ಅಪಾಯಕ್ಕೆ ಮೈಯೊಡ್ಡಲೇಬೇಕು
ಯಾಕೆಂದರೆ ಯಾವಾಗ ಭಯ ಹೋಗುತ್ತದೆಯೆಂದರೆ
ಅದು ಏನೆಂಬುದನ್ನು ತಿಳಿದಾಗ
ಸಾಗರವನ್ನು ಪ್ರವೇಶಿಸುವುದೆಂದರೆ
ಸಾಗರದಲ್ಲಿ ಕಣ್ಮರೆಯಾಗುವುದಲ್ಲ
ಸಾಗರವೇ ತಾನಾಗಿಬಿಡುವುದು ಎಂದು ಅರಿವಾದಾಗ

– ಖಲೀಲ್ ಗೀಬ್ರಾನ್
ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ

*****

.          👆ಸಿದ್ಧರಾಮ ಕೂಡ್ಲಿಗಿ