ಅನುದಿನ ಕವನ-೨೦೭, ಕವಿ: ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ. ಕವನದ ಶೀರ್ಷಿಕೆ: ಬಾಳುವಂತ ಹೂವೇ….ಬಾಡುವಾಸೆಯೇ!?

ಬಾಳುವಂತ ಹೂವೇ….ಬಾಡುವಾಸೆಯೇ!?

ಮುಂಜಾನೆ
ಮುಸುಕೊದ್ದು ಮಲಗಿ
ಬೆಚ್ಚನೆಯ ಅವ್ವನ
ಎದೆಗೂಡಿನಲಿ ಉಸಿರಾಡಬೇಕಾದ
ಎಳೆ ಕರುಳಿಗೆ
ಸಂಸಾರದ ನೊಗ ಹೊರುವ
ಹೊರೆಯ ಬರೆ..!
ಸಲಹುವ ಅಪ್ಪ ಕೂಡಾ
ಜೀವವ ಕೈ ಬಿಟ್ಟು ಹೋದನೆ?
ದಿನ ತುತ್ತಿನ ಚೀಲ
ತುಂಬಿಸುವ ಧಾವಂತದಲಿ
ಶಿಕ್ಷಣದ ಅರಿವೇ ಅವಸಾನವಾಯಿತೆ?!

ಕುದುರೆಯಂತಹ ಕುಡಿಗೆ
ಈಗ ನಿದಿರೆಗೂ ರಜೆ ನೀಡಿ
ಅವ್ವ ಕಟ್ಟಿದ ಹೂ ಮಾಲೆಯಲಿ
ಸಂಸಾರದ ತುತ್ತಿನ ಚೀಲ ತುಂಬಬೇಕಿದೆ
ಮದಿರೆಯ ಮತ್ತಿನಲಿ
ಅಪ್ಪ ಸುಧೀರತನ ಕಳಕೊಂಡ ಮೇಲೆ
ಪೋರತನವೆಲ್ಲಾ ಪರದೇಸಿಯಾಗಿದೆ

ಕಡ್ಡಾಯ ಶಿಕ್ಷಣದ ಕಾನೂನಿದ್ದರೂ
ಬಿಸಿಯೂಟದ ದಾಸೋಹವಿದ್ದರೂ
ಮನೆಯ ಬಡತನ ನೀಗುತಿಲ್ಲ;
ತುತ್ತಿನ ಚೀಲ ತುಂಬುತಿಲ್ಲ
ಹೊತ್ತಿನ ಅರಿವೇ ತಿಳಿಯುತಿಲ್ಲ
ಹರಿದ ಅರಿವೆಯು ಮಾನ ಮುಚ್ಚುತಿಲ್ಲ
ಬಡತನವು ಬೆನ್ನಿಗಂಟಿಹುದು
ಸಿರಿತನವು ಅಣಕಿಸುತಿಹುದು

ಸಂವಿಧಾನದ ಸಮತೆಯಿದ್ದರೂ
ಸ್ವಾಭಿಮಾನವೂ
ಹೆಗಲಿಗಿದ್ದರೂ
ಹಸಿದ ಉದರ,ಬದುಕು ದುಸ್ತರ
ಅನುಗಾಲವೂ
ಬದುಕು ತತ್ತರ
ನನ್ನ ದೀನ ಪ್ರಶ್ನೆಗಳಿಗೆಲ್ಲಾ
ಆಳುವ ಮನಸುಗಳ ನಿರುತ್ತರ
ಹೇಗೆ ತಾನೆ ಬೆಳೆಯಲಿ
ಬಾನೆತ್ತರ?
ಬದುಕಬೇಕಾಗಿದೆ ಬದುಕುವೆನು
ಬೇಡವಾಗಿದೆ ನಿಮ್ಮ ತಾತ್ಸಾರದ
ಪ್ರೀತ್ಯಾಧಾರ
ಛಲವೇ ಬದುಕಿಗೆ ಆಧಾರ..!

-ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ
*****