ಬೆಂಗಳೂರು, ಜು.27: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಾರೆ.
ಮಂಗಳವಾರ ಸಂಜೆ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಶಾಸಕರು ಸರ್ವಾನುಮತದಿಂದ ಆಯ್ಕೆ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಪುತ್ರರಾಗಿರುವ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ.
ಜನತಾ ಪರಿವಾರದ ಗರಡಿಯಲ್ಲಿ ರಾಜಕೀಯ ಆರಂಭಿಸಿದ ಬಸವರಾಜ ಬೊಮ್ಮಾಯಿ ಅವರು ಸರಳ, ಸಜ್ಜನಿಕೆ, ವಿನಯಶೀಲತೆಗೆ ಹೆಸರಾಗಿದ್ದಾರೆ. ಹುಬ್ಬಳ್ಳಿಯ ಭೂಮರೆಡ್ಡಿ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ.
ಜನತಾ ಪರಿವಾರದಿಂದ ಬಿಜೆಪಿಗೆ ಸೇರಿದ ಬಳಿಕ ಪಕ್ಷ ಆಡಳಿತ ನಡೆಸಿದ ಅವಧಿಯಲ್ಲಿ ಗೃಹ, ಬೃಹತ್ ನೀರಾವರಿ, ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಬೊಮ್ಮಾಯಿ ಅವರಿಗೆ ಇದೆ.
ಬುಧವಾರ ಬೆಳಿಗ್ಗೆ ಬಸವರಾಜ ಬೊಮ್ಮಾಯಿ ಅವರು ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬೊಮ್ಮಾಯಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಗಳಾಗುವ ಅದೃಷ್ಟ ಬಿ. ಶ್ರೀರಾಮುಲು, ಗೋವಿಂದ ಕಾರಜೋಳ ಮತ್ತು ಆರ್. ಅಶೋಕ್ ಅವರಿಗೆ ಲಭಿಸಿರುವುದು ಇವರ ಅಭಿಮಾನಿಗಳಲ್ಲಿ ಹರ್ಷ ತಂದಿದೆ.
*****
👆ನಾಡಿನ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ