ಸ್ವಾತಂತ್ರ್ಯ ಹೋರಾಟದ ಕಿಚ್ಚು ಮೂಡಿಸುವಲ್ಲಿ ಬೀದಿನಾಟಕ ಪ್ರದರ್ಶನಗಳು ಯಶಸ್ವಿಯಾಗಿದ್ದವು -ಡಾ.ಗೋವಿಂದ್

ಬಳ್ಳಾರಿ,ಜು.28: ಬೀದಿನಾಟಕ ಪ್ರದರ್ಶನದ ಮೂಲಕ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮೂಡಿಸುವಲ್ಲಿ ಅಂದಿನ ಸಾಹಿತಿಗಳು, ಕಲಾವಿದರು ಮಾಡಿದ ಕಾರ್ಯ ಶ್ಲಾಘನೀಯ ಎಂದು ಹಂಪಿ ಕನ್ನಡ ವಿವಿಯ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಗೋವಿಂದ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಡಿ.ಕಗ್ಗಲ್ ಅವರ ಸಹೋಗದಲ್ಲಿ ನಗರದ ಡಿಆರ್‌ಕೆ ರಂಗಸಿರಿಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಬೀದಿನಾಟಕ ಜಾಗೃತಿ ಗೀತೆಗಳ ಐದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್‌ನಿಂದ ಅನೇಕ ಜನ ಕಲಾವಿದರು ನಲುಗಿ ಹೋಗಿದ್ದು,ಅವರ ಸ್ಥಿತಿ ಗಂಭೀರವಾಗಿದೆ. ಈ ಸಂದರ್ಭದಲ್ಲಿ ಲಲಿತ ಕಲೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದ್ದು;ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಕಲಾವಿದರಿಗಾಗಿ ಮೀಸಲಿಟ್ಟಿರುವ ಯೋಜನೆಗಳು ಸರಿಯಾಗಿ ಅವರಿಗೆ ತಲುಪುವಂತಾಗಬೇಕು; ಈ ಮೂಲಕ ಅವರ ಬದುಕು ಮೊದಲಿನಂತಾಗಬೇಕು ಎಂಬ ಸದಾಶಯದ ಮಾತುಗಳನ್ನಾಡಿದ ಅವರು ಹೆಚ್ಚಿನ ಬೀದಿನಾಟಕಗಳನ್ನು ರಚಿಸಿ, ಬೀದಿನಾಟಕ ಸಾಹಿತಿಗಳ ಕೊರತೆ ನೀಗಿಸಿ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಅವರು ಮಾತನಾಡಿ, ಸಾಂಸ್ಕೃತಿಕ ಕಲಾತಂಡಗಳ ಕಲಾ ಪ್ರದರ್ಶನವು ನಿಜಕ್ಕೂ ನೋಡಲು ಮನಮೋಹಕವಾಗಿರುತ್ತದೆ. ನಮ್ಮ ಆರೋಗ್ಯ ಇಲಾಖೆಯಿಂದ ಈ ರೀತಿಯ ಕಲಾ ತರಬೇತಿಗಳನ್ನು ಆಯೋಜಿಸಿ ಪ್ರೋತ್ಸಾಹ ನೀಡಿಕೊಂಡು ಬರಲಾಗುತ್ತಿದೆ. ಬೀದಿನಾಟಕಗಳ ಮೂಲಕ ಸರಕಾರದ ಯೋಜನೆಗಳ ಕುರಿತ ಜಾಗೃತಿಯನ್ನು ಜನರಲ್ಲಿ ಪರಿಣಾಮಕಾರಿಯಾಗಿ ಮೂಡಿಸಿ ಎಂದರು. ಕೋವಿಡ್ ನಿಯಮಾವಳಿಗಳನ್ನ ಅನುಸರಿಸಿಕೊಂಡು ತರಬೇತಿ ಯಶಸ್ವಿಗೊಳಿಸಿ ಮತ್ತು ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಕಲಿಸುವ ಪ್ರತಿಯೊಂದು ವಿಷಯಗಳನ್ನು ಅಳವಡಿಸಿಕೊಳ್ಳಿ ಎಂದರು.
ರಂಗಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯೋಜಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಮಾತನಾಡಿ ಬೀದಿನಾಟಕಗಳ ಪ್ರದರ್ಶನದ ಸಂದರ್ಭದಲ್ಲಿ ಅತ್ಯಂತ ಪರಿಣಾಮಕಾರಿಯಾದ ಭಾವಾಭಿನಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಶಿಬಿರಾರ್ಥಿಗಳು ಮಾಡಬೇಕು ಎಂದರು.
ಬೀದಿನಾಟಕಗಳಲ್ಲಿ ಸಿನಿಮಾ ಹಾಡುಗಳು ಬಳಸುವ ಹಳೆಯ ಪದ್ಧತಿಗೆ ತೀಲಾಂಜಲಿ ನೀಡಿ; ಆಯಾ ಸನ್ನಿವೇಶಕ್ಕೆ ತಕ್ಕಂತೆ ತಾವೇ ಗೀತೆಗಳನ್ನು ರಚಿಸಿ ಅಳವಡಿಸಿಕೊಂಡು ಪ್ರದರ್ಶನ ನೀಡಿದ್ದಲ್ಲಿ ಸಾರ್ವಜನಿಕರನ್ನು ಬೀದಿನಾಟಕಗಳತ್ತ ಸೆಳೆಯಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಂಜುನಾಥ ಕೊಂಬಳಿ ತಂಡದವರು ಬೀದಿನಾಟಕ ಜಾಗೃತಿ ಗೀತೆಗಳನ್ನು ಹಾಡಿದರು. ವೀರೇಶ್ ದಳವಾಯಿ ತಂಡದವರು ಬೀದಿನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕರಾದ ವಿಷ್ಣು ಹಡಪದ, ಡಾ.ಸಂಗಮೇಶ್ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
*****