ಕೆ ಎಸ್ ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡಲು ಕುರುಬರ ಸಂಘ ಒತ್ತಾಯ

ಬಳ್ಳಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಕುರುಬ ಸಮುದಾಯದ ಹಿರಿಯ ಶಾಸಕ ಕೆ.ಎಸ್ ಈಶ್ವರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಕೆ. ಎರ್ರಿಗೌಡ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದ ಹಿಂದುಳಿದ ವರ್ಗಗಳಲ್ಲಿ ದೊಡ್ಡ ಸಮುದಾಯವಾಗಿರುವ ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ಯ ನೀಡಬೇಕು. ಸಮುದಾಯದ ಕೆ.ಎಸ್.ಈಶ್ವರಪ್ಪ ಅವರು ಸಹ ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸಿದ್ದಾರೆ ಎಂದರು.
ಬಿಜೆಪಿಗೆ ಯಾವತ್ತೂ ನಿಷ್ಠಾವಂತರಾಗಿದ್ದು, ಎಂತಹ ಸಂದರ್ಭದಲ್ಲೂ ಈಶ್ವರಪ್ಪ ಅವರು ಪಕ್ಷವನ್ನು ಬಿಟ್ಟಿಲ್ಲ. ಕೆಡುಕನ್ನು ಬಯಸಿಲ್ಲ. ಕೆಲವರು ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಕಟ್ಟಿ ಮತ್ತೇ ವಾಪಸ್ ಬಂದರು. ಇನ್ನು ಕೆಲವರು ಇತರ ಪಕ್ಷ ಸೇರಿ ವಾಪಸ್ ಬಿಜೆಪಿಗೆ ಬಂದರೂ, ಈಶ್ವರಪ್ಪನವರು ಮಾತ್ರ ಮಾತೃಪಕ್ಷಕ್ಕೆ ಎಂದೂ ದ್ರೋಹ ಬಗೆದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಎ.ಮಲ್ಲೇಶಪ್ಪ, ಖಜಾಂಚಿ ಮೋಹನ್ ಕೆ, ಸಹ ಕಾರ್ಯದರ್ಶಿ ಹೊನ್ನೂರಸ್ವಾಮಿ ಸೇರಿದಂತೆ ಇತರರು ಇದ್ದರು.
*****