“ದೀಪವೆಂದರೆ ದಹಿಸಿಕೊಂಡು ಬೆಳಕ ನೀಡುವ ಬತ್ತಿಯ ತ್ಯಾಗದ ನಿದರ್ಶನ. ಬೆಳಕಿಗಾಗಿ ಬಲಿದಾನವಾಗುವ ತೈಲದ ಅರ್ಪಣೆಯ ಪ್ರದರ್ಶನ. ದೀಪದ ಬೆಳಕಿನ ಹಿಂದಿರುವ ಬತ್ತಿ, ತೈಲಗಳ ತ್ಯಾಗ ಬಲಿದಾನಗಳು ಹೇಗೆ ಕಾಣುವುದಿಲ್ಲವೋ, ಹಾಗೆ ಬೆಳಕ ಹರಡುವವರ, ಬೆಳಕಾಗಿ ಬೆಳಗುವವರ ಬದುಕಿನ ಕಷ್ಟಾನಷ್ಟಗಳು ಜಗತ್ತಿಗೆ ತಿಳಿಯುವುದೇ ಇಲ್ಲ. ಏನಂತೀರಾ..?”. – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇
ವಿಪರ್ಯಾಸ.!
ಲೋಕದ ಕಂಗಳಿಗೆ
ದೀಪ ಹಿಡಿದವರ
ಮುಗುಳ್ನಗೆಯಷ್ಟೇ
ಚೆಲುವು ನಿಲುವಷ್ಟೆ
ದೃಶ್ಯ ಗೋಚರ.!
ಜನರ ನಯನಗಳಿಗೆ
ದೀಪ ಹಿಡಿದವರ
ಕರಗಳುಂಡ ತಾಪ
ಬಿಸಿಪ್ರಭೆಯ ಪ್ರತಾಪ
ಅದೃಶ್ಯ ಅಗೋಚರ.!
ಬೆಳಕು ಹಂಚುವರ
ಬಾಳ ಪರಿಹಾಸವಿದು
ಜಗ ಬೆಳಗಲೆಂದೇ..
ಬೆಂಕಿಯುಂಡವರ
ಸತ್ಯ ಇತಿಹಾಸವಿದು.!
-ಎ.ಎನ್.ರಮೇಶ್. ಗುಬ್ಬಿ.
*****