ಕವಿ ಪರಿಚಯ:
ಕವಿ ಮಾಲತೇಶ ನಾ ಚಳಗೇರಿ ಅವರು ವೃತ್ತಿಯಲ್ಲಿ
ಆಂಗ್ಲಭಾಷಾ ಶಿಕ್ಷಕರು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಷಟ್ಪದಿಯಲ್ಲಿ 450, ಭಾಮಿನಿ 25 ತಲ ಷಟ್ಪದಿ 50 ಶರ ಷಟ್ಪದಿಯಲ್ಲಿ ಸಾಹಿತ್ಯ, ಛಂದಸ್ಸಿನಲ್ಲಿ 60 ಕವನ, 50 ಚುಟುಕು, 75 ಮುಕ್ತಕಗಳು ಹಾಗೂ ‘ಕನಕೇಶ್ವರ’ ನಾಮಾಂಕಿತದಲ್ಲಿ 100 ವಚನಗಳನ್ನು ರಚಿಸಿದ್ದಾರೆ.
ಕರ್ಮವೀರ ವಾರಪತ್ರಿಕೆ, ಜನಮಿಡಿತ ಬದಲಾವಣೆ ದಿನಪತ್ರಿಕೆಗಳಿಗೆ ಇವರ ಲೇಖನಗಳು ಪ್ರಕಟವಾಗಿರುವುದು ವಿಶೇಷ.
ಅಂತಾರಾಷ್ಟ್ರೀಯ ಸ್ನೇಹಿತರ ದಿನಾಚರಣೆ ಹಿನ್ನಲೆಯಲ್ಲಿ ಮಾಲತೇಶ್ ಎನ್ ಚಳಗೇರಿ ಅವರು ರಚಿಸಿರುವ ‘ಗೆಳೆಯರು-ಗೆಳೆತನ’ ಕವಿತೆ ಇಂದಿನ ಅನುದಿನ ಕವನದ ಗೌರವಕ್ಕೆ ಪಾತ್ರವಾಗಿದೆ.
ಹಗರಿ ಬೊಮ್ಮನಹಳ್ಳಿಯ ಪ್ರತಿಭಾವಂತ ಸಂಗೀತ ಶಿಕ್ಷಕಿ ಶ್ರೀಮತಿ ಶಾರದ ಕೊಪ್ಪಳ ಅವರು ಈ ಕವಿತೆಗೆ ರಾಗ ಸಂಯೋಜಿಸಿ ವೃಂದಗಾನದಲ್ಲಿ ಸುಶ್ರಾವ್ಯವಾಗಿ ಹಾಡಿದ್ದಾರೆ. ಹಗರಿಬೊಮ್ಮನಹಳ್ಳಿಯ ಯುವ ಪ್ರತಿಭೆಗಳಾದ ಕು. ಅರ್ಪಿತಾ.ಎಸ್, ವರ್ಣಿಕ ಎಸ್.ಎಂ ಮತ್ತು ಎಸ್. ಅಮೃತಾ ಅವರು ಸಹ ಗಾಯಕರಾಗಿ ಗಮನ ಸೆಳೆದಿದ್ದಾರೆ.👇
ಗೆಳೆಯರು- ಗೆಳೆತನ….
ಭಾರದ ಮನಸನು ಹಗುರವ ಮಾಡಲು
ಖಾರದ ಗೆಳೆತನ ಇಲ್ಲಿಹುದು।
ದಾರದ ತೆರದಲಿ ಹೂವಿನ ಜೊತೆಯಲಿ
ಪೊರೆಯುತ ಸಗ್ಗವ ಸೇರುವುದು॥ ೧
ಮಾಡಿದ ತಪ್ಪನು ಒಪ್ಪುತ ನಡೆಯುವ
ಹಾಡುವ ಗೆಳೆತನ ಬೇಡಪ್ಪ।
ಮಾಡದ ತಪ್ಪನು ಹೊರೆಸುತ ನಡೆಯುವ
ಕಾಡುವ ಗೆಳೆತನ ಬೇಡಪ್ಪ॥ ೨
ಚಂದದ ಮಾತಲಿ ಪ್ರೇರಣೆ ಮಾಡುವ
ಗಂಧದ ಗೆಳೆತನ ಬೇಕಪ್ಪ।
ಬಂಧಿಸಿ ಮನದೊಳು ಬೆಳಕನು ತೋರುತ
ನಂದನಗೊಳಿಸಿವ ಗೆಳೆತನ ಬೇಕಪ್ಪ॥ ೩
ಚಾಡಿಯ ಹೇಳುತ ಕಡುನುಡಿಯಾಡುತ
ರಾಡಿಯ ಗೆಳೆತನ ಬೇಡಪ್ಪ।
ಕಾಡುವ ಮನಸಲಿ ಸ್ನೇಹದಿ ವರ್ತಿಸಿ
ಮೋಡಿಯ ದ್ರೋಹವು ಬೇಡಪ್ಪ॥ ೪
ತಪ್ಪನು ಮನ್ನಿಸಿ ಅಪ್ಪುತ ಸ್ನೇಹವ
ಒಪ್ಪಿತ ಮನದಲಿ ನಡೆಯೋಣ॥
ರೆಪ್ಪೆಯ ತೆರದಲಿ ರಕ್ಷಿಸಿ ಸ್ನೇಹವ
ಭಪ್ಪರೆ ಎನ್ನುತ ಮೆರೆಸೋಣ॥ ೫
-ಮಾಲತೇಶ ಎನ್ ಚಳಗೇರಿ
ಬ್ಯಾಡಗಿ
[ಸ್ನೇಹ ದಿನದ ಶುಭಾಶಯದೊಂದಿಗೆ 🌹🌹]
*****👆 ಮಾಲತೇಶ ಎನ್ ಚಳಗೇರಿ