ಕಾಫಿ ಮಾಡ್ತೀಯಾ ಹೇಮಾ !
ಕೈಯಲ್ಲಿ ಮೊಬೈಲ್ ಹಿಡಿದು
ಅದರಲ್ಲೇ, ಮುಳುಗಿ
ಅದೇನೋ ಓದುತ್ತಾ
ಆಗಾಗ ನಸುನಗುತ್ತಾ ಇದ್ದವನ
ಮುದ್ದು ಮುಖವ ಕದ್ದು
ನೋಡುವ ಆಸೆಯಿಂದ ಬಳಿ ಸಾರಿದರೆ
ಅವ ಕೇಳುವುದು ಒಂದೇ ಪ್ರಶ್ನೆ
ಕಾಫಿ ಮಾಡ್ತ್ಯಾ ಹೇಮಾ ,
ಅವನ ಬಾಯಲ್ಲಿ ನನ್ನೆಸರ
ಕೇಳುವುದು ಅದೇನು ಖುಷಿ ಗೊತ್ತಾ, ಅವನಿಗಿದು ಗೊತ್ತಿಲ್ಲದಿರಬಹುದು ,
ನಿಮಗೆ ಹೇಳಿಬಿಡ್ತೀನಿ ಕೇಳಿ
ಗಟ್ಟಿ ಹಾಲು ಬೆರೆಸಿ, ತುಸು ಸಿಹಿಯ
ಸೇರಿಸಿ, ಹುಡಿ ಕಾಫಿಯ ಕಲಕಿ
ದೊಡ್ಡದೆರಡು ಲೋಟದಲ್ಲಿ
ಗಲಬರಿಸಿ, ಅವನ ಕೈಗಿಡೋದೇ ನನಗೆ ಸಿರಿ,
ತನ್ನ ಕೈಗೆ ಕಾಫಿ ಲೋಟ ಬರುವುದನ್ನೇ
ಪುಟ್ಟ ಹುಡುಗನಂತೆ ಕಾದು
ಹಬೆಯಾಡುವ ಕಾಫಿ ಹೀರುತ್ತಾ
ಅಲ್ಲೆಲ್ಲೋ ನಡೆದು ಹೋದವ
ಮತ್ತೆ ಅರೆಘಳಿಗೆಯಲೇ
ಪ್ರತ್ಯಕ್ಷ.
ಮತ್ತದೇ ಮುದ್ದು ಸುರಿವ ಧಾಟಿಯಲಿ
ಕಾಫಿ ಮಾಡ್ತೀಯಾ ಹೇಮಾ !
ಕಾಫಿಯ ಧ್ಯಾನದಲಿ ಮುಳುಗೇಳುವ
ನನ್ನನ್ನೇ ಸಂಪೂರ್ಣ ಅವನೆಡೆಗೆ ಸೆಳೆದುಬಿಟ್ಟ
ಅವನ ಮೋಡಿಯ ಅಲೆಗೆ ಒಡ್ದು
ಕಟ್ಟಲು ಆಗದೇ ಚಡಪಡಿಸಿ
ನಿಂತಲ್ಲಿ ನಿಲಲಾಗದೇ, ನಿದ್ದೆ ಬಾರದ
ರಾತ್ರಿಗಳಲ್ಲೂ ಮಾರ್ದನಿಸಿತ್ತು
ಮತ್ತೆ ಮತ್ತೆ ಅವನದೇ ಮೋಹಕ ಮನವಿ
ಕಾಫಿ ಮಾಡ್ತೀಯಾ ಹೇಮಾ !
-ಹೇಮಾವತಿ, ಬೆಂಗಳೂರು
*****