ನೀರಜ ಕನಕ
ಕಷ್ಟದ ಕೆಸರಲಿ ಅರಳಿದ ಹೂವಿದು
ಇಷ್ಟವೆ ಆದನು ನೀರಜನು।
ಶಿಷ್ಟನೆ ನಡೆಯಲಿ ಗೆದ್ದನು ಜಗವನು
ಪುಷ್ಟಿಯ ನೀಡಿದ ಸೈನಿಕನು॥ ೧
ಹಗಲಲಿ ಇರುಳಲಿ ಕನಸಲಿ ಮನಸಲಿ
ಬಗ್ಗಿಸಿ ಬಳಲಿಸಿ ದೇಹವನು।
ಜಗ್ಗದೆ ನೋವಿಗೆ ಕುಗ್ಗದೆ ಬಾಧೆಗೆ
ನುಗ್ಗುತ ಸಾಗಿದ ಗುರಿಯೆಡೆಗೆ॥ ೨
ದೇಶವ ಕಾಯುವ ಸೈನಿಕನಾದರು
ಪಾಶದ ತೆರದಲಿ ಮಣಿಯುತಲಿ।
ರೋಷದಿ ಗುರಿಯನು ಮುಟ್ಟುವ ಛಲದಲಿ
ಪೋಷಿಸಿ ದೇಶದ ಮಡಿಲಿನಲಿ॥ ೩
ತೋರದೆ ಮಡಿಲಿನ ಕೆಂಡವ ಲೋಕಕೆ
ಮೇರೆಯ ಮೀರಿಸಿ ದೇಶವನು।
ನೀರಜನಾಗಿಹ ವೀರ ಯೋಧನು
ತಾರೆಗಳಂತೆಯೆ ಮಿನುಗಿಹನು। ೪
ಕನಕವು ನಿನ್ನಯ ಪಾದಕೆ ಎರಗಲು
ಲೋಕವೆ ನಮಿಸಿತು ನಿನ್ನಡಗೆ।
ನಾಕವ ಮಾಡಿದೆ ಭಾರತ ಮಾತೆಯ
ಸೂಕಿಸಿ ಕನಕವ ಅವಳಡಿಗೆ॥ ೫
ಗೆಲುವಿಗೆ ಬೀಗದೆ ವಿನಯದಿ ಮುನ್ನಡಿ
ಸಲುವುತ ಪ್ರೀತಿಯ ಎದೆಯೊಳಗೆ।
ಫಲವದು ದೊರಕಿತು ಹೆಮ್ಮೆಯ ಪಡುತಲಿ
ಮಲಗಿರು ಭಾರತಿ ಮಡಿಲೊಳಗೆ॥ ೬
-ಮಾಲತೇಶ ಎನ್ ಚಳಗೇರಿ
ಬ್ಯಾಡಗಿ
*****