ನೀನಾದ್ರೂ ಹೇಳಪ್ಪಾ…(ಶಿಶು ಕಾವ್ಯ)
ಅಪ್ಪಾ – ಅಪ್ಪಾ
ಅಮ್ಮನಿಗೆ ನೀನಾದ್ರೂ ಹೇಳಪ್ಪ !
ಬರೀ ಸುಳ್ಳೇ ಹೇಳ್ತಾಳೆ,
ಭಾರಿ ತರಲೆ ಮಾಡ್ತಾಳೆ!
ನೀನೇ ನೋಡಪ್ಪ
ಗೆಳೆಯರ ಕೂಡ ನನ್ನನು ಬಿಟ್ಬಿಟ್ಟು
“ಆಡುಮರಿ – ಆಡುಮರಿ ” ಅಂತಾಳೆ
ಸುತ್ತೆಲ್ಲಾ ಹುಡುಕಾಡೀದ್ರೂ
‘ಆಡೂನೂ ಇಲ್ಲ ಕುರೀನೂ’ ಇಲ್ಲ
ಹೀಗ್ಯಾಕಂದರೆ ಬೈತಾಳೆ !
ಊಟಕೆ ತಟ್ಟೆ ಹಾಕ್ಬಿಟ್ಟು
‘ ಕೂಸುಮರಿ – ಜಾಣಮರಿ’ ಅಂತಾಳೆ
ಜಾಸ್ತಿ ಊಟ ಬೇಡ ಅಂದ್ರೆ
” ಥೂ ದಡ್ಡ ” ಅಂತ ಬೈತಾಳೆ
ಸ್ನಾನಕ್ಕೆ ಮುನ್ನ ಚಡ್ಡಿ ಬಿಚ್ಚದಿದ್ರೆ
” ನೀನಿನ್ನೂ ಮಗು ನಾಚಿಕೆಯಾಕೆ ? ” ಅಂತಾಳೆ !
ಜಳಕ ಮಾಡಿ ಚಡ್ಡಿ ಹಾಕ್ಕೋಳ್ಳೋಕೆ
ತಡಮಾಡೀದ್ರೆ ” ಧಡಿಯಾ ” ಅಂತಾ ಬೈತಾಳೆ !
ಮಾಮಾ ಮನೆಗೆ ಬಂದಾಗ
ಮಾತಾಡದಿದ್ರೆ ,
ಮಾತಾಡು – ಮಾತಾಡು ಅಂತಾಳೆ !
ಹೆಚ್ಚಿಗೆ ಮಾತಾಡಿದರೆ
ಮತ್ತು – ಮತ್ತೂ ಬೈತಾಳೆ !
ಅಪ್ಪಾ – ಅಪ್ಪಾ,
ಅಮ್ಮನಿಗೆ ನೀನಾದರೂ
ಹೇಳಪ್ಪಾ !
-ಪ್ರಕಾಶ್ ಮಲ್ಕಿ ಒಡೆಯರ್, ಹೂವಿನಹಡಗಲಿ
*****