ಕವಯತ್ರಿ ಪರಿಚಯ:
ಕವಯತ್ರಿ ನಾಗರೇಖಾ ಗಾಂವಕರ ಅವರು
ವೃತ್ತಿಯಲ್ಲಿ ಉಪನ್ಯಾಸಕರು. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಏಣಿ ಪದಗಳೊಂದಿಗೆ ನಾನು ಬರ್ಫದ ಬೆಂಕಿ ಕವನ ಸಂಕಲನಗಳು. ಪಾಶ್ಚಿಮಾತ್ಯ ಸಾಹಿತ್ಯಲೋಕ, ಆಂಗ್ಲ ಸಾಹಿತ್ಯಲೋಕ ಸ್ತ್ರೀ- ಸಮಾನತೆಯ ಸಂಧಿಕಾಲದಲ್ಲಿ ಅಂಕಣಬರಹ ಕೃತಿಗಳು. ದಿ ಡೈರಿ ಆಫ್ ಎ ಯಂಗ್ ಗರ್ಲ – ಆನ್ ಫ್ರಾಂಕ್- ಅನುವಾದಿತ ಕೃತಿ. ಕವಾಟ ಪುಸ್ತಕ ಪರಿಚಯ ಕೃತಿ
ಪ್ರಶಸ್ತಿಗಳು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪದತ್ತಿ ಪ್ರಶಸ್ತಿ ‘ಲಿಂ. ಲೀಲಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ- ಬೆಳಗಾವಿ ನೀಡುವ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘ-ಬೆಂಗಳೂರು ನೀಡುವ ಗೀತಾ ದೇಸಾಯಿ ದತ್ತಿಬಹುಮಾನ, ಮೌನದೊಳಗೊಂದು ಅಂತಧರ್ಾನ ಕಥಾಸಂಕಲನ ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ,ಮುಂಬೈ ಕೊಡಮಾಡುವ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಪ್ರಶಸ್ತಿ ಲಭಿಸಿದೆ.
ಇಂದಿನ ಅನುದಿನ ಕವನದ ಗೌರವಕ್ಕೆ ನಾಗರೇಖಾ ಅವರ ‘ಪ್ರಮಾದಗಳು’ ಕವಿತೆ ಪಾತ್ರವಾಗಿದೆ.👇
ಪ್ರಮಾದಗಳು….
ಆದ ಗಾಯ ಒಣಗುವ
ಮುನ್ನ ಎಡವಿ ಬಿದ್ದು ಮತ್ತಲ್ಲಿಯೇ
ನೋವ ದುಪ್ಪಟ್ಟು ಇಳಿಸಿ
ನೋಡುವುದು ನಡಿಗೆಯ ದೋಷವೋ?
ಭವದ ನೆರಳಿನಾಟದ ಕಣ್ಣು ಮುಚ್ಚಾಲೆಯೋ?
ಘಟಿಸುತ್ತವೆ ಪ್ರಮಾದಗಳುನಿನ್ನೆ ಇದ್ದವಳು ಇಂದಿಲ್ಲ.
ನೆರಮನೆಯ ಹಿರಿಸೊಸೆ,
ಮನೆಮಂದಿಯ ಕಾಳಜಿ
ಮಾಡುತ್ತಾ, ಜಗತ್ತನ್ನೆ ಜಯಿಸುವ ಉಮೇದು
ಇದ್ದವಳು..
ತೆಂಗಿನ ಗಿಡದ ಕಸ ಬಿದ್ದದ್ದಕ್ಕೆ
ರಂಪರಾಮಾಯಣವೆಬ್ಬಿಸಿ
ಮಾತು ಬಿಟ್ಟವಳು..
ಮಾತನಾಡಿಸಬೇಕಿತ್ತು ನಾವಾದರೂ
ಕ್ಷಣಭಂಗುರತೆಯ ಅರಿತೂ
ಸ್ವಾಭಿಮಾನದ ಕುದಿಯಲ್ಲಿ
ಬೆಂದು ಹೋದವರು.
ಘಟಿಸುತ್ತವೆ ಪ್ರಮಾದಗಳು.ಎಷ್ಟೋ ಜನರ ಜೀವ ಉಳಿಸಿದ
ವೈದ್ಯ, ಸ್ವ ಕಾಯಿಲೆಗೆ
ಸಹಕರಿಸದ ದೇಹಬಿಟ್ಟು ನಡದೇ ಬಿಟ್ಟ
ಘಟಿಸುತ್ತವೆ ಪ್ರಮಾದಗಳುಹಾಲು ಕುಡಿಯುತ್ತ ಮಲಗಿತ್ತು
ಕಂದ, ನಿದ್ದೆಯ ಭರದಲ್ಲಿ
ತಾಯಿಯ ಮೊಲೆಯೇ
ಉಸಿರ ಕಸಿದಿತ್ತು.
ಘಟಿಸುತ್ತವೆ ಪ್ರಮಾದಗಳು.ಕೆಲವು ಘಟನೆಗಳು ಹೀಗೆ
ಏಕಾಏಕಿ ಸಂಭವಿಸುತ್ತವೆ
ಅಸಹನೀಯ ಪರಿಣಾಮಗಳ
ಶೇಷವಾಗುಳಿಸುತ್ತವೆ
ಪ್ರಮಾದಗಳು ಘಟಿಸಿಬಿಡುತ್ತವೆ
ಕೆಲವೊಮ್ಮೆ…
-ನಾಗರೇಖಾ ಗಾಂವಕರ, ದಾಂಡೇಲಿ
*****