ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ವಿವೇಕ ವೇದಿಕೆ ಬಳ್ಳಾರಿ ಸಹಭಾಗಿತ್ವದಲ್ಲಿ ವಿವಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಹ ಮತ್ತು ಮನಸ್ಸು ಶುದ್ಧವಾಗಿರುವ ಪ್ರತಿಯೊಬ್ಬರು ಗುರುವಿನ ಸ್ಥಾನದಲ್ಲಿರುತ್ತಾರೆ. ಕಪ್ಪು-ಬಿಳುಪಿನ ಬದುಕಿಗೆ ಬಣ್ಣ ನೀಡಿದವನೇ ಗುರು. ಜ್ಞಾನದ ಪರಿಪೂರ್ಣತೆ ಪಡೆಯಲು ಮನುಜನು ಶಿಶುವಾಗಬೇಕು. ಪಡೆದ ಜ್ಞಾನವನ್ನು ಇಂದ್ರೀಯಗಳ ಮೂಲಕವಾಗಿ ಪ್ರೇಮಭಾವದಿಂದ ಸಮಾಜಕ್ಕೆ ಸತ್ಕಾರ್ಯ ಮಾಡಿದರೆ ಅದುವೇ ನಿಜವಾದ ಗುರು ದಕ್ಷಿಣೆ ಎಂದರು.
ನನ್ನಿಚ್ಛೆಯನ್ನು ನಿನ್ನಿಚ್ಛೆಗೆ ಅರ್ಪಿಸುವ ಭಾವನೆ ಮತ್ತು ಲೋಕಕಲ್ಯಾಣಕ್ಕಾಗಿ ತನ್ನತನವನ್ನು ಅರ್ಪಿಸಿಕೊಳ್ಳುವುದೇ ನಿಜವಾದ ಗುರುವಂದನೆ ಮತ್ತು ದೇವವಂದನೆ, ಗುರುದೀವಿಗೆಯಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಂಜಪ್ಪ ಹೊಸಮನೆ ಅವರು ಮಾತನಾಡಿ, ಆಧುನಿಕ ವಿಜ್ಞಾನವು ಮನುಜ ಸಂಸ್ಕೃತಿಯನ್ನು ಮರೆತಿದೆ. ವೇದ, ಉಪನಿಷತ್ತು ಮತ್ತು ಮಂತ್ರಗಳು ನಮ್ಮ ದೇಶದ ಆವಿಷ್ಕಾರಗಳು, ಇವುಗಳ ನಿರಂತರ ಪಠಣದಿಂದ ಮನಸ್ಸು ಹಾಗೂ ಬುದ್ಧಿ ವಿಕಸನವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪದ್ಮಾ ವಿಠ್ಠಲ್ ಅವರು ಮಾತನಾಡಿ, ವಿಶ್ವವಿದ್ಯಾಲಯಗಳು ಸೂರ್ಯನಿದ್ದಂತೆ, ಯಾವುದೇ ಜಾತಿ-ಮತ ಎಂಬ ಭೇದ-ಭಾವವಿಲ್ಲದೆ ಜ್ಞಾನದಾಹಿಗಳಿಗೆ ಶಿಕ್ಷಣ ಧಾರೆ ಎರೆಯುವ ಶಕ್ತಿ ಕೇಂದ್ರಗಳು. ಭಾರತೀಯ ಚಿಂತನೆ ಎಂಬುದು ವಿಶ್ವದ ಎಲ್ಲ ಸಂಶೋಧನೆಗಳಲ್ಲಿ ಎದ್ದು ಕಾಣುತ್ತದೆ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸಕಲ ಎಂಬ ಲೋಕೋಪಯೋಗಿ ವಿಚಾರಧಾರೆಯಿಂದ ವಿಶ್ವವಿದ್ಯಾಲಯಗಳಲ್ಲಿ ಇಂದಿಗೂ ಗುರು-ಶಿಷ್ಯ ಪರಂಪರೆ ಕಾಣಬಹುದು ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ ಆಲಗೂರ ಮಾತನಾಡಿ, ವಿದ್ಯಾಗುರುವಿನ ಸ್ಥಾನದಲ್ಲಿರುವ ನಾವೆಲ್ಲರೂ ಜಗತ್ತಿಗೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಕೆಲಸ ಮಾಡಬೇಕು. ನೈತಿಕ ಮೌಲ್ಯ, ದೇಶಪ್ರೇಮ, ಸತ್ಕಾರ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯ ನಮ್ಮದಾಗಬೇಕು. ಬ್ರಹ್ಮ ಜೀವಿಗಳನ್ನು ಸೃಷ್ಟಿಸಿದರೆ, ಗುರು ಶಿಷ್ಯರನ್ನು ಸ್ಠಷ್ಟಿಸುತ್ತಾರೆ. ಹೀಗಾಗಿ ಗುರುಗಳೆಂದರೆ ಆಧುನಿಕ ಬ್ರಹ್ಮನಿದ್ದಂತೆ. ಕಣ್ಣು ಮುಂದೆ ಗುರಿ, ಬೆನ್ನ ಹಿಂದೆ ಗುರುವಿದ್ದರೆ ಜಗತ್ತೇ ಗೆಲ್ಲಬಹುದು ಎಂದು ಪ್ರತಿಪಾದಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಸಿ.ಪಾಟೀಲ್ ಅವರು ವಿಶ್ವವಿದ್ಯಾಲಯದ ಮುಖ್ಯ ಆವರಣ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ನಡೆದಿರುವ ಸುಮಾರು 75 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.
ವಿತ್ತಾಧಿಕಾರಿ ಡಾ. ಕೆ ಸಿ ಪ್ರಶಾಂತ್, ವಿವೇಕ ವೇದಿಕೆ ಬಳ್ಳಾರಿಯ ಟಿ. ಪ್ರಸನ್ನ ಉಪಸ್ಥಿತರಿದ್ದರು.
ವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ. ಶಶಿಕಾಂತ್ ಉಡಿಕೇರಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಎಲ್ಲ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವೇಕ ವೇದಿಕೆ ಬಳ್ಳಾರಿಯ ಪದಾಧಿಕಾರಿಗಳು, ಎಲ್ಲ ನಿಕಾಯದ ಡೀನರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
*****