ಶಾನವಾಸಪುರದಲ್ಲಿ ಶಿಲಾಶಾಸನ ಪ್ರತಿಷ್ಠಾಪನೆ: ಶಿಲೆಯಲ್ಲಿ ಅರಳಿದ ಮನಂ ಅವರ ‘ನಾವೆಲ್ಲಾ ಭಾರತೀಯರು…’ ಘೋಷ ವಾಕ್ಯ!

 

(ಸಿ.ಮಂಜುನಾಥ್)
ಬಳ್ಳಾರಿ, ಆ.13: “ನಾವೆಲ್ಲಾ ಭಾರತೀಯರು…
ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ…..
ನಮ್ಮ ಧರ್ಮಗ್ರಂಥ ಭಾರತದ ಸಂವಿಧಾನ…” ಈ ಮೂರು ಸಾಲುಗಳು ಎಂತಹವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ…
ಈ ಉತ್ಕೃಷ್ಟ ಸಾಲುಗಳ ಕತೃ ಸಾಹಿತಿ, ಸಂಶೋಧಕ, ನಾಡಿನ ಉನ್ನತ ಪೊಲೀಸ್ ಅಧಿಕಾರಿ ಎಂ. ನಂಜುಂಡ ಸ್ವಾಮಿ ಅವರು. ಸಾಹಿತ್ಯ ವಲಯದಲ್ಲಿ ಮನಂ ಕಾವ್ಯನಾಮದಿಂದ ಚಿರಪರಿಚಿತರಾಗಿರುವ ನಂಜುಂಡಸ್ವಾಮಿ ಅವರ ಈ ದೇಶಪ್ರೇಮ, ದೇಶಭಕ್ತಿಯನ್ನು ಉದ್ದೀಪಿಸುವ, ಸಂವಿಧಾನದ ಮಹತ್ವ ಸಾರುವ ‘ನಾವೆಲ್ಲಾ ಭಾರತೀಯರು…..’ ಘೋಷ ವಾಕ್ಯ ಸಾಲುಗಳು ಇವರ  ಸಾಕಷ್ಟು ಅಭಿಮಾನಿಗಳನ್ನು ಆಕರ್ಷಿಸಿವೆ ಮಾತ್ರವಲ್ಲ ಮನಂ ಅವರ ಹತ್ತಾರು ಅಭಿಮಾನಿ, ಹಿತೈಷಿಗಳು ಕೈಮೇಲೆ, ಎದೆಯ ಮೇಲೆ ಹಚ್ಚೆಯಾಗಿ ರಾರಾಜಿಸುತ್ತಿವೆ. ನೂರಾರು ಜನ ತಮ್ಮ ಲಕ್ಷಾಂತರ ರೂ. ಬೆಲೆ ಬಾಳುವ ವಾಹನಗಳ ಮೇಲೆ ಬರೆಸಿ ಸಂತೋಷಪಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಘೋಷವಾಕ್ಯ ಪಾಶ್ಚಾತ್ಯ, ಶಾಸ್ತ್ರೀಯ ಸಂಗೀತದಲ್ಲಿ ರಾಗ ಸಂಯೋಜನೆಗೊಂಡು ಜನಮನ ಸೆಳೆದಿದೆ. ಹಗರಿಬೊಮ್ಮನಹಳ್ಳಿಯ ವಾಯಲಿನ್ ವಾದಕ ಪ್ರದೀಪ್ ಅಕ್ಕಸಾಲಿ ಮತ್ತು ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಅವರು ಕ್ರಮವಾಗಿ ರಾಗ ಸಂಯೋಜಿಸಿ ಹಾಡಿದ್ದಾರೆ.
ಇದೀಗ ಸಿರುಗುಪ್ಪ ತಾಲೂಕಿನ ಶಾನವಾಸಪುರದ ಮನಂ ಅವರ ಅಭಿಮಾನಿಗಳಾದ ಗ್ರಾಮ ಪಂಚಾಯತಿ ಸದಸ್ಯ, ಹೆಚ್. ಭಾಷ ಮತ್ತು ಯುವ ಸಂಘಟಕ ಶರಣಬಸಪ್ಪ ಅವರು ಸುಮಾರು ನಾಲ್ಕು ಟನ್ ಬ್ರಹತ್ ಗ್ರಾನೈಟ್ ಕಲ್ಲಿನಲ್ಲಿ ‘ನಾವೆಲ್ಲಾ ಭಾರತೀಯರು ಘೋಷ ವಾಕ್ಯ’ ವನ್ನು ಕೆತ್ತಿಸಿ ಗ್ರಾಪಂ ಕಚೇರಿ ಹಾಗೂ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಸಮೀಪ ಪ್ರತಿಷ್ಟಾಪಿಸಿ ಸಂಭ್ರಮಿಸಿದ್ದಾರೆ…ಇದೇ ಬುಧವಾರ( ಆ.11) ಶ್ರೀ ಮನಂ ಅವರ ಸಮ್ಮುಖದಲ್ಲಿ ಊರಿನ ಮುಖಂಡರೆಲ್ಲರೂ ಸೇರಿ ಶಿಲಾಶಾಸನ ಅನಾವರಣಗೊಳಿಸಿದ್ದಾರೆ. ಆ ಸಂದರ್ಭದಲ್ಲಿ ‘ನಾವೆಲ್ಲರೂ ಭಾರತೀಯರು…’ ಎಂದು  ನೆರೆದಿದ್ದ ಎಲ್ಲರೂ ಹೇಳಿ ಮೊಳಗಿಸಿದ್ದಾರೆ.
ನೂರಾರು ದೇವಸ್ಥಾನಗಳ ನಿರ್ಮಾಣದಲ್ಲಿ ಬೃಹತ್ ಕಂಬ, ತೊಲೆ ಕೆತ್ತಿರುವ ಮೋಕಾದ ವಿ. ರಾಮಣ್ಣ ಅವರ ಕರಕುಶಲದಲ್ಲಿ ಈ ಶಿಲಾಶಾಸನ ಅಂದವಾಗಿ ಅರಳಿದೆ…
ಸುಮಾರು ನಾಲ್ಕು ಟನ್ ತೂಕವಿರುವ ಬೃಹತ್ ಗ್ರಾನೈಟ್ ಕಲ್ಲಿನಲ್ಲಿ ರಾಮಣ್ಣ ಅವರು ಎರಡು ಎರಡೂವರೆ ದಿನಗಳ ಕಾಲ ನಿರಂತರವಾಗಿ ಶ್ರಮಿಸಿದ್ದಾರೆ.


ಅನಾವರಣ ಸಂದರ್ಭದಲ್ಲಿ ವಿ.ರಾಮಣ್ಣ ಅವರನ್ನು ಐಜಿಪಿ ಮನಂ ಅವರು ಸನ್ಮಾನಿಸಿ ಗೌರವಿಸಿದಾಗ ರಾಮಣ್ಣ ಕಣ್ಣಲ್ಲಿ ಆನಂದ ಭಾಷ್ಪ. ಕರ್ನಾಟಕ ಕಹಳೆ ಡಾಟ್ ಕಾಮ್ ಈ ಕುರಿತು ಪ್ರಶ್ನಿಸಿದಾಗ, ಮೂವತ್ತು ನಲವತ್ತು ವರ್ಷಗಳಿಂದ ನೂರಾರು ದೇವಾಲಯ ನಿರ್ಮಾಣ, ಕಟ್ಟಡ ಮತ್ತಿತರ ಕಲ್ಲಿನ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನನಗೆ ಮೊದಲ ಬಾರಿಗೆ ನನ್ನನ್ನು ಗೌರವಿಸಲಾಯಿತು. ಹೀಗಾಗಿ ನನಗೆ ಅರಿವಿಲ್ಲದಂತೆ ಕಣ್ಣುಗಳು ತೇವಗೊಂಡವು ಎಂದು ಹೇಳಿದರು.

ಮನಂ ಅವರು ಮಾತನಾಡಿ ಭಾರತದ ಸಂವಿಧಾನ ವಿಶ್ವದಲ್ಲೇ ‘ಶ್ರೇಷ್ಠ ಸಂವಿಧಾನ’ ಎಂಬ ಮನ್ನಣೆ ಇದೆ. ಶಾನವಾಸಪುರ ಗ್ರಾಮದಲ್ಲಿ ತಮ್ಮ ಘೋಷ ವಾಕ್ಯದ ಸಾಲುಗಳು ಬ್ರಹತ್ ಪಿಂಕ್ ಗ್ರಾನೈಟ್ ಕಲ್ಲಿನಲ್ಲಿ ಒಡಮೂಡಿ ಶಿಲಾಶಾಸನವಾಗಿರುವುದು ಸಂತೋಷ ತಂದಿದೆ. ಇದನ್ನು ನೋಡಿದ, ಓದಿದ ಜನರಲ್ಲಿ ಭಾರತದ ಸಂವಿಧಾನದ ಬಗ್ಗೆ ಮತ್ತಷ್ಟು ಗೌರವ, ಪ್ರೇಮ ಹುಟ್ಟುತ್ತದೆ. ಗ್ರಾಮದ ಅಲಿ ಭಾಷ, ಶರಣಬಸಪ್ಪ ಅವರ ಅಭಿಮಾನಕ್ಕೆ ಮೂಕನಾಗಿದ್ದೇನೆ ಎಂದು ತಿಳಿಸಿದರು.
ಶರಣ ಬಸಪ್ಪ ಮಾತನಾಡಿ, ತಮ್ಮ ಕೈಮೇಲೆ ಈಗಾಗಲೇ ಘೋಷವಾಕ್ಯದ ಸಾಲುಗಳನ್ನು ಹಚ್ಚೆ ಹಾಕಿಸಿಕೊಂಡು ಖುಷಿ ಪಡ್ತಿದ್ದೇನೆ. ತಮ್ಮ ಗ್ರಾಮದ ಊರಿನ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು ಅದರಲ್ಲೂ ಗ್ರಾಪಂ ಸದಸ್ಯ ಅಲಿ ಭಾಷ ಮತ್ತಿತರ ಗಣ್ಯರ ಸಹಕಾರ, ಬೆಂಬಲ ಸಿಕ್ಕಿದ್ದರಿಂದ ಶಿಲಾಶಾಸನ ನಿರ್ಮಿಸಿ ಪ್ರತಿಷ್ಟಾಪಿಸಲು ಸಾದ್ಯವಾಯಿತು. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಶಿಲಾಶಾಸನ ಪ್ರತಿಷ್ಟಾಪಿಸುವ ಯೋಜನೆ ಇದೆ ಎಂದರು.
ನಾಡಿನಲ್ಲಿ ಸಂವಿಧಾನದ ಮಹತ್ವ, ದೇಶ ಪ್ರೇಮ,ದೇಶ ಭಕ್ತಿ ಹೆಚ್ಚಿಸುವ ಕಾರ್ಯಗಳು ಮತ್ತಷ್ಟು ನೆರವೇರಲಿ ಎಂಬುದು ಕರ್ನಾಟಕ ಕಹಳೆ ಡಾಟ್ ಕಾಮ್ ನ ಆಶಯವೂ ಕೂಡಾ.