ಕರ್ನಾಟಕದ ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ರಾಜ್ಯ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ಒತ್ತಾಯ

ಬಳ್ಳಾರಿ, ಅ.14:ಮರಾಠ ಸಮುದಾಯಕ್ಕೆ  ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಶಂಕರಪ್ಪನವರ ವರದಿಯ ಶಿಫಾರಸ್ಸಿನ್ವಯ ಪ್ರವರ್ಗ 3ಬಿ ಯಿಂದ 2ಎಗೆ ಮೀಸಲಾತಿಯನ್ನು ಈ ಕೂಡಲೇ ಕಲ್ಪಿಸಬೇಕೆಂದು ಕರ್ನಾಟಕ ಮರಾಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ಹಾಗೂ ಬಳ್ಳಾರಿ ಮರಾಠ ಪರ ಸಂಘಟನೆಗಳು ಒತ್ತಾಯಿಸಿದವು.
ನಗರದ ಖಾಸಗಿ ಹೊಟೇಲ್ ನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಮರಾಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ವಿನೋದ್ ಎಂ. ಚವ್ಹಾಣ್ ಅವರು, ಕರ್ನಾಟಕದಲ್ಲಿ ಕ್ಷತ್ರಿಯ ಮರಾಠ ಸಮಾಜವು ಸುಮಾರು 40 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಮುದಾಯಕ್ಕೆ ಇತ್ತೀಚೆಗೆ ರಚನೆಗೊಂಡ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಸ್ಥಾನಮಾನ ದೊರೆಯದಿರುವುದು ದುರಾದೃಷ್ಟಕರ ಸಂಗತಿ ಎಂದು ವಿಷಾಧಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾದ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಜವಳಿ ಮತ್ತು ಕೈಮಗ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಶ್ರೀಮಂತ್ ಬಾಳಸಾಹೇಬ್ ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಮರಾಠರ ಪರವಾಗಿ ಇದ್ದ ಒಬ್ಬ ಸಚಿವರಿಲ್ಲದೇ ಇರುವುದು ಸಮಸ್ತ ಕರ್ನಾಟಕ ಮರಾಠ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ ಎಂದರು.
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2018ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ 24 ತಾಸುಗಳಲ್ಲಿ ಮರಾಠ ಸಮುದಾಯಕ್ಕೆ ಪ್ರವರ್ಗ 3ಬಿ ಯಿಂದ 2ಎಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ 24 ತಿಂಗಳುಗಳ ಕಾಲ ಮುಖ್ಯಮಂತ್ರಿಗಳಾಗಿದ್ದರೂ ಸಹ ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಮರಾಠ ಅಭಿವೃದ್ಧಿ ನಿಗಮ ಮಂಡಳಿ ಘೋಷಿಸಿದ್ದರೂ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ ಮತ್ತು ಅಧ್ಯಕ್ಷರ ನೇಮಕ ಮಾಡದೇ ಅದರ ಅನುಷ್ಠಾನವನ್ನು ಮರೆತಿರುವುದು ಮರಾಠ ಜನಾಂಗವನ್ನು ನಿರ್ಲಕ್ಷಿಸಲಾಗಿದೆ ಎಂದು ವಿನೋದ್ ಚವ್ಹಾಣ್ ದೂರಿದರು.
ಸಾಂಪ್ರದಾಯಿಕ ಬಿಜೆಪಿಯ ಮತದಾರರಾದ ಮರಾಠ ಸಮುದಾಯದ ಕಡೆಗಣನೆ ಮಾಡಿರುವುದು ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಕೂಡಲೇ ಮರಾಠ ಸಮುದಾಯದ ಹಿರಿಯರಾದ ಶ್ರೀಮಂತ್ ಪಾಟೀಲ್‍ರಿಗೆ ಸಿಎಂ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮರಾಠ ಮುಖಂಡರುಗಳಾದ ಮುರಾರಿರಾವ್ ಜಾಧವ್, ಯಶ್ವಂತ್‍ರಾವ್ ಜಗತಾಪ್, ನಾಗರಾಜರಾವ್ ಚವ್ಹಾಣ್, ಶರದ್ ಶಿಂಧೆ, ವಸಂತರಾವ್, ಲಕ್ಷ್ಮಣರಾವ್ ಬಾಬರ್, ಅಮರೇಶ್ ಘೋರ್ಪಡೆ, ದಿನೇಶ್ ನಲವಡೆ, ರುದ್ರೋಜಿರಾವ್ ಶಿಂಧೆ ಮತ್ತಿತರರು ಭಾಗವಹಿಸಿದ್ದರು.
*****