ಬಳ್ಳಾರಿ, ಆ.14: ನಗರದ ಬಳ್ಳಾರಿ ವಲಯದ ಐಜಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಮಡ್ ಹೆಡ್ ಕಾನ್ಸ್ ಟೇಬಲ್ ಬಿ. ಎಸ್ ದಾದಾ ಅಮೀರ್ ಅವರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಶ್ಲಾಘನೀಯ ಪೊಲೀಸ್ ಸೇವಾ ಪದಕ ದೊರೆತಿದೆ.
ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆ ರಾಷ್ಟ್ರಪತಿ ಪದಕ ಹಾಗೂ ಸಿಬ್ಬಂದಿಗಳಿಗೆ ಪೊಲೀಸ್ ಸೇವಾ ಪದಕ ನೀಡಿ ಗೌರವಿಸಲಾಗುತ್ತದೆ.
ಶನಿವಾರ ಕೇಂದ್ರ ಗೃಹ ಇಲಾಖೆ ಪದಕಗಳ ವಿಜೇತರ ಪಟ್ಟಿ ಬಿಡುಗಡೆ ಮಾಡಿದೆ.
ಬಳ್ಳಾರಿ ವಲಯ ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡಿದ್ದು ದಾದಾ ಅಮೀರ್ ಅವರೊಬ್ಬರಿಗೆ ಈ ಬಾರಿ ಪೊಲೀಸ್ ಸೇವಾ ಪದಕ ದೊರೆತಿದ್ದು ವಲಯದಲ್ಲಿ ಸಂಭ್ರಮ ಮನೆ ಮಾಡಿದೆ.
ರಾಜ್ಯದ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳಾದ ಎಡಿಜಿಪಿ(ಸಿಐಡಿ) ಉಮೇಶ್ ಕುಮಾರ್ ಹಾಗೂ ಎಡಿಜಿಪಿ(ಆಂತರಿಕ ಭದ್ರತೆ) ಅರುಣ್ ಚಕ್ರವರ್ತಿ ಅವರಿಗೆ ಈ ಬಾರಿ ರಾಷ್ಟ್ರಪತಿ ಪದಕ ಹಾಗೂ ದಾದಾ ಅಮೀರ್ ಸೇರಿದಂತೆ 19 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಶ್ಲಾಘನೀಯ ಪೊಲೀಸ್ ಸೇವಾ ಪದಕ ದೊರೆತಿದೆ.
ಅಭಿನಂದನೆ: ಬಳ್ಳಾರಿ ವಲಯದ ನಿಕಟಪೂರ್ವ ಐಜಿಪಿ, ಪ್ರಸ್ತುತ ರಾಜ್ಯ ಕಾರಾಗೃಹ ಸುಧಾರಣಾ ಇಲಾಖೆಯ ಐಜಿಪಿ ಎಂ.ನಂಜುಂಡಸ್ವಾಮಿ ಅವರು ದಾದಾ ಅಮೀರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಸೇವಾ ಪದಕ ಲಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯರೂ, ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಮಂಜುನಾಥ್ ಅವರು ಬಳ್ಳಾರಿ ವಲಯಕ್ಕೆ ವಿಶೇಷವಾಗಿ ಅವಿಭಜಿತ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿರುವ ದಾದಾ ಅಮೀರ್ ಅವರನ್ನು ಅಭಿನಂದಿಸಿದ್ದಾರೆ.
*****