ಬಳ್ಳಾರಿ, ಆ. 16: ಸಾಂಸ್ಕೃತಿಕ ಲೋಕಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ತಿಳಿಸಿದರು.
ಬೆಂಗಳೂರಿನ ಅಭಿನವ ಪ್ರಕಾಶನ ಹಾಗೂ ಅರಿವು ಸಂಸ್ಥೆ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಸಂಜೆ ಜರುಗಿದ ಆಂಗ್ಲ ಸಾಹಿತಿ ಎಡಿತ್ ನೆಸ್ಬಿಟ್ ಅವರ ದಿ ರೈಲ್ವೆ ಚಿಲ್ಡ್ರನ್
(ಅನುವಾದ: ಅರವಿಂದ್ ಪಟೇಲ್) ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ರಾಘವ, ಡಾ. ಜೋಳದರಾಶಿ ದೊಡ್ಡನಗೌಡ ಸೇರಿದಂತೆ ಹಲವರು ಸಾಂಸ್ಕೃತಿಕ ಲೋಕಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ ಎಂದರು.
ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ದೇಶಗಳ ಗಡಿ ಅಡ್ಡ ಬರುವುದಿಲ್ಲ ಎಂದು ಹೇಳಿದರು.
ಸಾಂಸ್ಕೃತಿಕ ಮಾಲಿನ್ಯ ವಾಯು ಮಾಲಿನ್ಯಕ್ಕಿಂತ ಅಪಾಯಕಾರಿ ಎಂದರು. ಜನರ ಮನಸ್ಸುಗಳನ್ನು ಒಡೆಯುವ ಶಕ್ತಿಗಳ ವಿರುದ್ಧ ಪ್ರತಿಯೊಬ್ಬರೂ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಆರ್ಥಿಕ ಕಾರಣಕ್ಕಾಗಿ ಜಾಗತೀಕರಣಗೊಂಡ ನಾವು ಸಾಂಸ್ಕೃತಿಕವಾಗಿ ಕೂಡ ಜಾಗತೀಕರಣಕ್ಕೆ ಒಳಗೊಳ್ಳಬೇಕು ಎಂದು ಆಶಿಸಿದರು.
ಪುಸ್ತಕ ಬಿಡುಗಡೆ ಮಾಡಿದ ಧಾರವಾಡ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಅವರು ಮಾತನಾಡಿ, ಮಕ್ಕಳ ಪುಸ್ತಕ ಬರೆಯುವುದು ಮಕ್ಕಳಾಟವಲ್ಲ ಎಂದರು. ಮಕ್ಕಳ ದೃಷ್ಟಿಕೋನ ಹಾಗೂ ಸ್ಪಂದನೆ ವಿಭಿನ್ನವಾದುದು ಹಾಗೂ ಮಕ್ಕಳಿಂದ ಹಿರಿಯರು ಕಲಿಯಬೇಕಾದ ಬಹಳಷ್ಟು ವಿಷಯಗಳಿರುತ್ತವೆ .ಕೃತಿಯಲ್ಲಿ ಮಕ್ಕಳ ಮತ್ತು ಹಿರಿಯರ ವಿಭಿನ್ನ ದೃಷ್ಟಿಕೋನಗಳ ಅನಾವರಣ ತುಂಬಾ ಸುಂದರವಾಗಿದೆ. ಕೃತಿ ಅನುವಾದಕ ಡಾ.ಅರವಿಂದ ಪಾಟೀಲ್ ಅವರು ಕನ್ನಡ ಮಕ್ಕಳ ಸಾಹಿತ್ಯಕ್ಕೆ ಒಂದು ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು .
ಕೃತಿ ಪರಿಚಯಿಸಿದ ಧಾರವಾಡ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ನಿಂಗಪ್ಪ ಮುದೇನೂರು ಅವರು ಕನ್ನಡ ಭಾವಲೋಕಕ್ಕೆ ಉತ್ತಮ ಕೊಡುಗೆ ಈ ಪುಸ್ತಕ. ಜಗತ್ತಿನ ಎಲ್ಲಾ ಪ್ರಗತಿಪರ ಸಮಾಜವಾದಿಗಳ ನಿಲುವು ಒಂದೇ ಆಗಿರುತ್ತದೆ .ರೈಲು ಕೂಡ ಒಂದು ಕುಟುಂಬದ ಸದಸ್ಯರು ಆಗಬಲ್ಲದು ರೈಲಿನ ಮೂಲಕ ಹಿರಿಯರ ಬಾಲ್ಯಗಳ ಮನೋಧರ್ಮ ವಿಕಾಸ ಮಾಡುವ ಸಂಗತಿ ,ಅಮ್ಮನ ಪಾತ್ರ ,ತಾಯಿತನದ ಕಾಳಜಿ ಪ್ರಾಮಾಣಿಕತೆ ,ಜೀವಂತಿಕೆ ಎಲ್ಲವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ ಎಂದರು .ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಸ್ವತಂತ್ರ ಜೀವಿಗಳು ಎನ್ನುವುದನ್ನು ಈ ಕೃತಿ ಸಾಬೀತುಪಡಿಸಲು ಪ್ರಯತ್ನಪಟ್ಟಿದೆ. ಸ್ವಾಭಿಮಾನಿ ಅಮ್ಮ ಹೇಗೆ ಸಮಾಜವನ್ನು ಕಟ್ಟಬಲ್ಲರು ಎಂಬುದನ್ನು ಈ ಕೃತಿ ಅನಾವರಣಗೊಳಿಸಿದೆ ಎಂದು ಹೇಳಿದರು.
ಲೇಖಕ ಡಾ. ಅರವಿಂದ್ ಪಟೇಲ್ ಮಾತನಾಡಿ, ಇಂಗ್ಲಿಷ್ ಭಾಷಾಜ್ಙಾನ ಗಟ್ಟಿಯಾಗಿರದ ನನಗೆ ಕೃತಿ ರಚಿಸುವ ಆತ್ಮವಿಶ್ವಾಸ ಪ್ರಾರಂಭದಲ್ಲಿ ಅಷ್ಟಾಗಿ ಇರಲಿಲ್ಲ .ಆದರೆ ಇಂಗ್ಲಿಷ್ ಮೂಲ ಕೃತಿಯನ್ನು ಓದಲು ಪ್ರಾರಂಭಿಸಿದ ಮೇಲೆ ಅದು ನನ್ನ ಜೀವನದ ಅನೇಕ ಘಟನೆಗಳ ನೆನಪು ಮಾಡಿಕೊಡುವ,ಭಾವನೆಗಳನ್ನು ಮರುಕಳಿಸುವ ರೀತಿಯಲ್ಲಿ ಪ್ರಭಾವಿಸಿತು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣನವರು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸಾಹಿತ್ಯ ಅತ್ಯಗತ್ಯ ಎಂದರು.
ಮಾತೃಭಾಷೆ ಹೃದಯದ ಭಾಷೆಯಾದರೆ ಇಂಗ್ಲಿಷ್ ಮೆದುಳಿನ ಭಾಷೆ ಎಂದು ಹೇಳಿದರು.
ಡಾ. ಮಹಿಪಾಲ್, ಸಿರಿಗೇರಿ ಪನ್ನಾರಾಜ್ ಮಾತನಾಡಿದರು.
ಮಕ್ಕಳ ಸಾಹಿತಿ ಹಂದ್ಯಾಳು ಶಿವಲಿಂಗಪ್ಪ ಸ್ವಾಗತಿಸಿದರು. ಅಧ್ಯಾಪಕ ಪರಮೇಶ್ ಸೊಪ್ಪಿಮಠ ಅವರು ನಿರೂಪಿಸಿದರು ಅರಿವು ಸಂಸ್ಥೆಯ ಸಂಚಾಲಕ ಪನ್ನರಾಜ್ ಸಿರಿಗೇರಿ ಹಾಗೂ ಕೃತಿಯ ಓದಿನ ಅನುಭವ ಹಂಚಿಕೊಂಡ ಕು.ಹರ್ಷವರ್ಧನ ಅವರು ಉಪಸ್ಥಿತರಿದ್ದರು.
ಡಾ.ಜ್ಯೋತಿ ಪಟೇಲ್ ವಚನ ಗಾಯನಗಳ ಮೂಲಕ ಪ್ರಾರ್ಥಿಸಿದರು. ವಿದ್ವಾನ್ ನಾಗಭೂಷಣ ಬಾಪುರೆ ಹಾರ್ಮೋನಿಯಂ ಮತ್ತು ತಬಲ ಹರ್ಷ ಆಚಾರ್ ಸಾಥ್ ನೀಡಿದರು.
*****