ಅನುದಿನ ಕವನ-೨೨೮ ಕವಯತ್ರಿ: ಡಾ.‌ಸೌಗಂಧಿಕ ವಿ. ಜೋಯಿಸ್, ನಂಜನಗೂಡು ಕಾವ್ಯ: ಗಜಲ್

ಗಜಲ್

ಪರರ ದೋಷವನು ಹುಡುಕುತ ಬದುಕು
ಕಳೆದೆಯಲ್ಲ ನೀನು
ತರುಹಿ ಮನದಲಿ ವಿಕೃತ ಸ್ವಾರ್ಥವ
ತಳೆದೆಯಲ್ಲ ನೀನು

ಅನ್ಯರ ಚಿಂತನೆಗೆ ರೆಕ್ಕೆ ಪುಕ್ಕಗಳ ಸೇರ್ಪಡೆ
ಒಳಿತಲ್ಲ
ಅಮೂಲ್ಯ ಕಾಲವನು ಸರಿಸುತ ಗಮನ
ಸೆಳೆದೆಯಲ್ಲ ನೀನು

ಅಳಿದ ಸಮಯ ಎಂದೂ ಮರಳಿ ಬಾರದು
ನೆನಪಿರಲಿ
ದುರುಳರ ಸಂಗಮಾಡಿ ಬಾಳಿನ ಪರದೆ
ಎಳೆದೆಯಲ್ಲ ನೀನು

ಅರಿವು ಇದ್ದರೂ ಕರಾಳ ದಿನಗಳ ಸನಿಹ
ಸಾಗಿದೆಯಲ್ಲಾ
ಮಾಯೆಯ ಮೋಹದ ಮುಳ್ಳಿನ ಹಾದಿಯಲಿ ಸುಳಿದೆಯಲ್ಲಾ ನೀನು

ಸುಗಂಧ ಪಸರಿಸಿ ಸುಮವು ಸುವಾಸನೆ
ಬೀರುತ ಅರಳಿದೆ
ಕಲುಷ ತುಂಬಿಹ ಚಿತ್ತದಲಿ ಭರವಸೆಯ
ತುಳಿದೆಯಲ್ಲ ನೀನು

✍️ಡಾ. ಸೌಗಂಧಿಕಾ. ವಿ.ಜೋಯಿಸ್, ನಂಜನಗೂಡು
*****