ಬಳ್ಳಾರಿ: ರಾಜ್ಯ ರೈಲ್ವೆ ಕ್ರಿಯಾಸಮಿತಿಯ ನಿಯೋಗ ಗದಗ ನಗರಕ್ಕೆ ಗುರುವಾರ ಆಗಮಿಸಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಮಂತ್ರಿ ನಾರಾಯಣಸ್ವಾಮಿ ಅವರನ್ನು ಭೇಟಿಯಾಗಿ ಹಲವು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿತು.
ನಿಯೋಗದ ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಕೆ.ಎಂ ಮಹೇಶ್ವರ ಸ್ವಾಮಿ ಅವರು, ಚಿತ್ರದುರ್ಗ ಬಳ್ಳಾರಿ ಮಾರ್ಗವಾಗಿ ಸಂಚರಿಸುವ ಮೈಸೂರು ವಾರಣಾಸಿ ಎಕ್ಸ್ ಪ್ರೆಸ್ ರೈಲು ಮಾರ್ಗ ಬದಲಾಯಿಸುವ ರೈಲ್ವೆ ಇಲಾಖೆಯ ನಿರ್ಧಾರವನ್ನು ತಡೆಯುವಂತೆ ಒತ್ತಾಯಿಸಿದರು.
ಅಲ್ಲದೆ ಈ ರೈಲನ್ನು ದಿನನಿತ್ಯ ಸಂಚರಿಸಲು ಕ್ರಮಕೈಗೊಳ್ಳ ಬೇಕು. ಬಳ್ಳಾರಿ ಲಿಂಗಸುಗೂರು ಹಾಗೂ ಗಂಗಾವತಿ ದರೋಜಿ ನೂತನ ರೈಲ್ವೆ ಮಾರ್ಗವನ್ನು ಆರಂಭಿಸಬೇಕು.
ಸಂಡೂರಿನಿಂದ ತೋರಣಗಲ್ಲಿಗೆ ನೂತನ ರೈಲನ್ನು ಆರಂಭಿಸುವಂತೆ ಪತ್ರದಲ್ಲಿ ಮನವಿ ಸಲ್ಲಿಸಲಾಗಿದೆ.
ಈ ಎಲ್ಲ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಖಾಂತರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಕಳಿಸುವಂತೆ ರಾಜ್ಯದ ಲೋಕೋಪಯೋಗಿ ಸಚಿವ ಸಿಸಿ ಪಾಟೀಲರಿಗೆ ಕೂಡ ಇದೇ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿತು.
ಸಮಿತಿಯ ಅಧ್ಯಕ್ಷ ಕೆಎಂ ಮಹೇಶ್ವರಸ್ವಾಮಿ ಸಮಿತಿಯ ಪದಾಧಿಕಾರಿಗಳಾದ ಹಂಪೇರು ಹಾಲೇಶ್ವರ ಗೌಡ, ಗುಡಾರ ನೀಲಕಂಠಪ್ಪ, ಕೆ ತಿಮ್ಮಪ್ಪ ಅವರು ನಿಯೋಗದಲ್ಲಿದ್ದರು.
*****