ಅನುದಿನ‌ಕವನ-೨೩೪, ಕವಿ: ಎ ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ನೋಟ ಮಾಟ!

“ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ನಿತ್ಯ ಸತ್ಯ ಬೆಳಕಿನ ಭಾವಗೀತೆ. ಮನದಂಗಳದಿ ಇರುವ ಸತ್ಯ ಬೆಳಕಿನ ಜೀವಂತ ಜಿಂಕೆಯನ್ನು ಬಿಟ್ಟು, ಜಗದಂಗಳದಿ ಮಿಥ್ಯ ಬೆಳಕಿನ ಮಾಯಾಜಿಂಕೆಯನ್ನು ಬೆನ್ನಟ್ಟಿ ಬಳಲುವ ನಾವೆಷ್ಟು ಮರುಳರು ಅಲ್ವಾ..?. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ನೋಟ-ಮಾಟ.!

ಅಳುವ ಹೃದಯಕೆ
ಅಳುಕು ಮನಸಿಗೆ
ಎಲ್ಲೆಡೆಯು ಸಂಕಟವೆ
ಎಲ್ಲದರಲ್ಲು ದುಃಖವೆ.!

ನಗುವ ಒಡಲಿಗೆ
ಗಟ್ಟಿ ಗುಂಡಿಗೆಗೆ
ಎಲ್ಲೆಡೆ ಸಂಭ್ರಮವೆ
ಸಕಲವೂ ಸಂತಸವೆ.!

ಒಲ್ಲದ ಪಾದಗಳಿಗೆ
ಹಾದಿ ಕಲ್ಲುಹಾಸು
ಹುರುಪು ಹೆಜ್ಜೆಗಳಿಗೆ
ದಾರಿಪೂರಾ ಹೂಹಾಸು,!

ಕಾಣುವ ಸೃಷ್ಟಿಯಲಿಲ್ಲ
ಸುಖದುಃಖ ಚಂದ್ರಮ
ನೋಡುವ ದೃಷ್ಟಿಯಲ್ಲಿದೆ
ನೋವುನಲಿವು ಸಂಭ್ರಮ.!

ಕಾಂತಿಯುಳ್ಳ ನಯನಕೆ
ಇರುಳಲ್ಲು ಬೆಳಕ ಸಾಕಾರ
ತಮವುಳ್ಳ ಕಂಗಳಿಗೆ
ಹಗಲಲ್ಲೂ ಅಂಧಕಾರ.!

ಹೊರಗಣ ಹಣತೆಗೆ
ಚಡಪಡಿಸುವ ಬದಲು
ಒಳಗಣ ಪ್ರಣತೆಗೆ
ಜೀವತುಂಬು ಮೊದಲು.!

-ಎ. ಎನ್. ರಮೇಶ್ ಗುಬ್ಬಿ