ಅನುದಿನ ಕವನ-೨೩೮, ಕವಿ: ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಯಾದಗಿರಿ ಕವನದ ಶೀರ್ಷಿಕೆ: ಬಾಗಿದ ಬೆನ್ನು

ಬಾಗಿದ ಬೆನ್ನು

ದುಡಿದು ದಣಿದು ಬಾಗಿದ ಬೆನ್ನು
ಮನೆಯಲ್ಲಿಲ್ಲ ಬಿಡಿಗಾಸು ಹೊನ್ನು
ಮಕ್ಕಳು ಕೈಯಲ್ಲಿ ಹಿಡಿಯಲಿಲ್ಲ ಪೆನ್ನು.

ಅನ್ನವಿಲ್ಲದೆ ಹಸಿದ ಹೊಟ್ಟೆ
ಮೈಮೇಲೆ ಹರಿದು ಹೋದ ಬಟ್ಟೆ
ಶಕ್ತಿಯಿಲ್ಲದ ಸೊರಗಿ ಹೋದ ರಟ್ಟೆ.

ತಾಳಲಾರದ ಬಡತನದ ಹೊರೆ
ಉಕ್ಕಿಬರುತ್ತಿದೆ ದುಃಖದ ಕಣ್ಣೀರ ತೊರೆ
ಕೇಳುವವರಿಲ್ಲ ಬಡವನ ಗೋಳಿನ ಮೊರೆ.

ಬಡವನ ಬದುಕಾಗಿದೆ ಕಂಗಾಲು
ಬಿಸಿಲ ಬೇಗೆಗೆ ಸುಡುವ ಅಂಗಾಲು
ವಯಸಿನ ಭಾರಕ್ಕೆ ಬಾಗಿದ ಮುಂಗಾಲು.

ಪೊರೆಬಂದು ಕಣ್ಣಾಗಿದೆ ಮಂಜು
ಹಣ್ಣಾದ ದೇಹದಲ್ಲಿ ತುಂಬಿದ ನಂಜು
ದಾರಿ ಕಾಣಲು ಕೈಯಲ್ಲಿ ಹಿಡಿದ ಪಂಜು.

ಹಲ್ಲು ಬಿದ್ದ ಬೊಚ್ಚು ಬಾಯಿ
ತೊದಲು ನುಡಿಗೆ ತಾನೇ ತಾಯಿ
ದೇಹ ಬಿಸಿಲಿಗೆ ಒಣಗಿದ ಹೀರೆ ಕಾಯಿ.

ಕಸುವು ಕಳೆದುಕೊಂಡ ನರನಾಡಿ
ಇಳಿ ವಯಸ್ಸಿನಲ್ಲಿ ನಾನಾ ರೋಗ ಕಾಡಿ
ಸೋತ ದೇಹ ಬದುಕುತ್ತಿದೆ ನೆಮ್ಮದಿ ಬೇಡಿ.

ಸುಕ್ಕುಗಟ್ಟಿದ ಮೈಮೇಲಿನ ಚರ್ಮ
ಅರ್ಥವಾಗಲಿಲ್ಲ ಬದುಕಿನ ಮರ್ಮ
ಕಷ್ಟದಿ ಕಳೆಯಬೇಕಾಗಿದೆ ಮಾಡಿದ ಕರ್ಮ.

-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಜಿಲ್ಲಾಧ್ಯಕ್ಷರು, ಸಿರಿಗನ್ನಡ ವೇದಿಕೆ, ಯಾದಗಿರಿ
*****