ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಕಾಮನೆಗಳೊಂದಿಗೆ ಕವಿತೆಯ ಕಾಣಿಕೆ ಒಪ್ಪಿಸಿಕೊಳ್ಳಿ..”
ಕೃಷ್ಣಾ ಎಂದರೆ ಮಾನವತ್ವದಿಂದ ದೈವತ್ವಕ್ಕೇರಿದ ಮಹಾ ಚೇತನ. ಬದುಕಿನ ಸತ್ಯ ಸತ್ವ ತತ್ವಗಳ ದಿವ್ಯ ನಿದರ್ಶನ. ಪ್ರತಿ ನುಡಿ ನುಡಿಯಲ್ಲೂ, ಪ್ರತಿ ನಡೆ ನಡೆಯಲ್ಲೂ ಜೀವ-ಜೀವನಗಳ ಮಾರ್ಗ ತೋರಿದ ಮಹಾಗುರು. ಕೃಷ್ಣಂ ವಂದೇ ಜಗದ್ಗುರು. ಏನಂತೀರಾ..?”. – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಯುಗಾವತಾರಿ.!
ಹುಟ್ಟಿದ ಘಳಿಗೆಯಿಂದಲೂ
ತಲೆಯ ಮೇಲೆ ಸಾವಿನ
ತೂಗುಗತ್ತಿ ಅನುಕ್ಷಣ.!
ಬಾಲ್ಯದಿಂದಲೂ ದಿನದಿನ
ಸವಾಲುಗಳ ಬಿಚ್ಚುಗತ್ತಿಯ
ಮೇಲೆಯೇ ಪಯಣ.!
ಅಪಾಯಗಳ ಮಡಿಲಲ್ಲೇ
ಹೋರಾಡುತ್ತಾ ಬೆಳೆದ
ನಂಬಿದವರ ಪ್ರತಿಕ್ಷಣವೂ
ಕಾಯುತ್ತಾ ಪೊರೆದ.!
ಎದುರಾದ ಭಯಂಕರ
ರಕ್ಕಸರುಗಳ ತರಿದ.!
ರಾಧೆಯ ಚಿರ ಪ್ರೇಮಕೆ
ಮುನ್ನುಡಿ ಬರೆದ.!
ಮುರಳಿಯ ನಾದದಿ
ಮಧುವನ ಕುಣಿಸಿದ.!
ಬೃಂದಾವನದಿ ಸಂತಸ
ಸಂಭ್ರಮ ಹೊನಲಾಗಿಸಿದ.!
ದೈತ್ಯಕುಲ ಸಂಹರಿಸುತ
ತೋಳ್ಬಲ ಶಸ್ತ್ರಕೌಶಲ್ಯ
ತೋರಿದ ರಣವೀರ.!
ಅಸ್ತ್ರ ಶಸ್ತಾಸ್ತ್ರ ಬಳಸದೇ
ಕುರುಕ್ಷೇತ್ರದಿ ಪಾಂಡವರ
ಗೆಲ್ಲಿಸಿದ ಮಹಾಚತುರ.!
ಅಣ್ಣನಾಗಿ ದ್ರೌಪದಿಯಾ
ಅಡಿಗಡಿಗೂ ರಕ್ಷಿಸಿದ.!
ಗೆಳೆಯನಾಗಿ ಪಾರ್ಥನ
ನಿರಂತರ ತಲೆಕಾಯ್ದ.!
ವೀಶ್ವರೂಪದಿ ಗುರುವಾಗಿ
ಜಗಕೆ ಗೀತೆ ಬೋಧಿಸಿದ.!
ಕೃಷ್ಣಾ ಎಂದರೆ ಧರೆಯ
ಉದ್ದರಿಸಿದ ಯುಗಾವತಾರಿ.!
ಜೀವಜೀವನ ತತ್ವಗಳ
ಬೆಳಗಿದ ಬೆಳಕಿನಝರಿ.!
ಗುರುಗಳಿಗೆ ಜಗದ್ಗುರುವಾಗಿ
ದಾರಿ ತೋರಿದ ದಿವ್ಯಪ್ರಹರಿ.!
-ಎ.ಎನ್. ರಮೇಶ್ ಗುಬ್ಬಿ