ಚಿತ್ರಕಲಾವಿದ ಮಂಜುನಾಥ ಗೋವಿಂದವಾಡರ ಶ್ರದ್ಧೆ, ಸಮರ್ಪಣಾ ಮನೋಭಾವ ಯುವ ಸಮೂಹಕ್ಕೆ ಮಾದರಿ -ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಕಕ್ಷ ಡಿ. ಮಹೇಂದ್ರ

ಬಳ್ಳಾರಿ, ಆ.29: ನಾಡಿನ ಸಾಹಿತ್ಯ, ರಂಗಭೂಮಿ, ಲಲಿತಾಕಲೆ, ಜಾನಪದ ಕ್ಷೇತ್ರಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ ಎಂದು ಕರ್ನಾಟಕ ಲಲಿತ ಕಲಾ ಆಕಾಡೆಮಿ ಅಧ್ಕಕ್ಷ ಡಿ. ಮಹೇಂದ್ರ ಅವರು ತಿಳಿಸಿದರು.
ನಗರದ ಶ್ರೀ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಕೊಟ್ಟೂರಿನ ಕವನ ಪ್ರಕಾಶನ ಪ್ರಕಟಿಸಿರುವ ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ ಅವರ ಜೀವನ ಮತ್ತು ಚಿತ್ರಕಲಾ ಸಾಧನೆಯ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಸರಕಾರ, ವಿವಿಧ ಅಕಾಡೆಮಿಗಳು ನೀಡುವ ಪ್ರಶಸ್ತಿ,ಗೌರವ, ಪುರಸ್ಕಾರಗಳಿಗೆ ಬಳ್ಳಾರಿ ಜಿಲ್ಲೆಯ ಪ್ರತಿಭಾವಂತ, ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಪಾತ್ರರಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಬಳ್ಳಾರಿ ಜಿಲ್ಲೆಯ ಕೈತಪ್ಪಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದ ಮಹೇಂದ್ರ ಅವರು ಮತ್ತೇ ಬಳ್ಳಾರಿಗೆ ತರಲು ಪ್ರಯತ್ನ ನಡೆಸಬೇಕು ಎಂದರು.


ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮಂಜುನಾಥ ಗೋವಿಂದವಾಡ ಅವರು ಪ್ರತಿಭಾಶಾಲಿ. ಚಿತ್ರಕಲೆಗೆ ತಮ್ಮನ್ನು ಸಮರ್ಪಿಸಿ ಕೊಂಡಿದ್ದಾನೆ. ಇವರ ಸಾಧನೆಯನ್ನು ಅಕಾಡೆಮಿ ಗಮನಿಸಿದೆ. ಇವರಿಗೆ ಸೂಕ್ತ ಸಂದರ್ಭದಲ್ಲಿ ಗೌರವ ಲಭಿಸುತ್ತದೆ. ಮಂಜುನಾಥ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಂಕ, ಉದ್ಯೋಗಗಳಿಸುವ ಭರದಲ್ಲಿ ಕ್ರಿಯಾಶೀಲತೆಯಿಂದ ದೂರವಾಗುತ್ತಿದ್ದಾರೆ ಎಂದು ಮಹೇಂದ್ರ ಅವರು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ , ಚಿತ್ರಕಲೆ ಪ್ರಾಚೀನ ಕಲೆಯಾಗಿದ್ದು ಶಿಲಾಯುಗ ಕಾಲದಿಂದಲೂ ಅಸ್ಠಿತ್ವದಲ್ಲಿದೆ. ಚಿತ್ರಕಲೆಗೆ ಭಾಷೆಯ ಬಂಧನವಿಲ್ಲ ಎಂದು ಅಭಿಪ್ರಾಯಪಟ್ಟರು.


ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಟಿ. ಕೊಟ್ರಪ್ಪ ಅವರು, ಕಲಾವಿದರಿಗೆ ತಮ್ಮ ಕಾರ್ಯಕ್ಷೇತ್ರದ ವಿಸ್ತರಣೆ ಮತ್ತು ಸಾಧನೆಯ ಬಗ್ಗೆ ಶ್ರದ್ದೆಯಿದ್ದಾಗ ಮಾತ್ರ ಕಲಾವಿದ ಪರಿಪೂರ್ಣ ಕಲಾವಿದನಾಗಲು ಸಾಧ್ಯ ಎಂದರು.
ತಮ್ಮ ಒಡನಾಟಕ್ಕೆ ಬಂದ ಮಂಜುನಾಥ ಗೋವಿಂದವಾಡ ಅವರ ಶ್ರದ್ಧೆ, ಪ್ರತಿಭೆ, ಸೂಕ್ಷ್ಮಗುಣಗಳ ಬಗ್ಗೆ ಹಲವು ಘಟನೆಗಳ ಸಮೇತ ಉದಾಹರಿಸಿದರು.
ಕೃತಿ ಲೇಖಕ ನಿಷ್ಠಿ ರುದ್ರಪ್ಪ ಅವರು ಮಾತನಾಡಿ, ನಮ್ಮ ಕಣ್ಮುಂದಿನ ಸಾಧಕರ ಜೀವನಚಿತ್ರಣವನ್ನ ವಸ್ತು ನಿಷ್ಠವಾಗಿ ಕಟ್ಟಿಕೊಟ್ಟಾಗ ಮಾತ್ರ ವ್ಯಕ್ತಿತ್ವ ಚಿತ್ರಣಗಳಿಗೆ ಮಹತ್ವ ಬರುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಕಾತ್ಯಾಯಿನಿ ಎಂ. ಮರಿದೇವಯ್ಯ ಅವರು ಮಾತನಾಡುತ್ತಾˌ ತಮ್ಮ ಸಂಸ್ಥೆಯಿಂದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡಲಾಗುವುದು ಎಂದರುˌ
ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಮಠಂ ಗುರುಪ್ರಸಾದˌ ಸರ್ವಮಂಗಳಮ್ಮ ಗೋವಿಂದವಾಡˌ ಮಹಾ ನಗರಪಾಲಿಕಯ ಸದ್ಯಸರಾದ ಸುರೇಖಾ ಮಲ್ಲನಗೌಡ ಮತ್ತು ವೀ.ವಿˌ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲನಗೌಡರು ಉಪಸ್ಥಿತರಿದ್ದರು. ಮಂಜುನಾಥ ಗೋವಿಂದವಾಡ ಅವರು ಮಾತನಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯ ಅನುತ್ತೀರ್ಣನಾದ ಸಂದರ್ಭ ಹಾಗೂ ಚಿತ್ರಕಲೆಯ ಸಾಧನೆಯಲ್ಲಿ ಅನುಭವಿಸಿದ ನೋವು ಅಪಮಾನ ದುಃಖವನ್ನು ಹೇಳುವಾಗ ಗದ್ಗಿತರಾದರು. ತಮ್ಮ ಕಲಾ ಸಾಧನೆಗೆ ನೆರವಾದವರನ್ನು ಸ್ಮರಿಸಿದರು.
ನಿವೃತ್ತ ಅಧಿಕಾತಿ ಎಸ್.ಎಂ. ಷಡಕ್ಷರಯ್ಯ ಮತ್ತು ಶಶಿಕಲಾ ಕಾಶೀನಾಥಸ್ವಾಮಿ ನೇಗಳೂರುಮಠ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಯಲಾಟ ಕಲಾವಿದೆ ಬಿ.ಸುಜಾತಮ್ಮ, ಕರ್ನಾಟಕ ಮಾಧ್ಯಮ‌ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.


ಪ್ರಕಾಶಕ, ಕವಿ ಅಜಯ ಬಣಕಾರˌ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಸತೀಶ ಎ. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಜಗದೀಶ ಬಸಾಪುರ ನಿರೂಪಿಸಿದರು. ಹಾಸ್ಯ ಭಾಷಣಕಾರ ಎ. ಯರ್ರಿಸ್ವಾಮಿ ವಂದನಾರ್ಪಣೆ ಸಲ್ಲಿಸಿದರು. ಅನುಮಯ್ಯ ಪ್ರಾರ್ಥಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಇತ್ತೇಚೆಗೆ ನಿಧನರಾದ ಹಿರಿಯ ಪತ್ರಕರ್ತ, ರಂಗಕರ್ಮಿ ಗುಡಿಹಳ್ಳಿ ನಾಗರಾಜ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
*****