ಬಳ್ಳಾರಿ, ಸೆ.5: ಶಿಕ್ಷಕರ ಶ್ರಮದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆ 10 ನೇ ಸ್ಥಾನ ಪಡೆದಿದೆ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಬಳ್ಳಾರಿ ಪೂರ್ವ ವಲಯದ ತಾಲೂಕು ವತಿಯಿಂದ ಭಾನುವಾರ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ರಾಷ್ಟ್ರಪತಿ ಡಾ.ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆನೀಡಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಪವಿತ್ರವಾಗಿದ್ದು . ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ದೇಶದ ಭಾವಿ ಪ್ರಜೆಗಳಾದ ಮಕ್ಕಳ ಭವಿಷ್ಯವನ್ನು ರೂಪಿಸುವ ರೂವಾರಿಗಳು ಎಂದು ಬಣ್ಣಿಸಿದರು.
ಬಳ್ಳಾರಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಡಿಮೆ ವೆಚ್ಚದಲ್ಲಿ ನಿವೇಶನ ದೊರಕಿಸಲು ಶ್ರಮಿಸಲಾಗುವುದು. 60×40 ಅಳತೆಯ ನಿವೇಶನಗಳನ್ನು ನಾಲ್ಕು ಲಕ್ಷ ರೂ.ಬೆಲೆಯಲ್ಲಿ ಸಿಗುವಂತೆ ಪ್ರಯತ್ನಿಸಲಾಗುವುದು ಎಂದರು.
ಎಲ್ಲಾ ಶಿಕ್ಷಕರಿಗೂ ಉಚಿತವಾಗಿ ಆರೋಗ್ಯ ಸೌಲಭ್ಯ ಸಿಗಬೇಕು. ಈ ಹಿನ್ನಲೆಯಲ್ಲಿ ಪ್ರಧಾನಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜೇಶ್ವರಿ ಸಮೂಹಸಂಸ್ಥೆಗಳ ಅಧ್ಯಕ್ಷ ಡಾ. ಎಸ್ ಜೆ ವಿ ಮಹಿಪಾಲ್ ಕ್ಷೇತ್ರಶಿಕ್ಷಣಾಧಿಕಾರಿ ಟಿ ಎಂ ಸಿದ್ದಲಿಂಗಮೂರ್ತಿ, ಬಿ ಆರ್ ಸಿ ಅಡ್ಡೇರ ಮಲ್ಲಪ್ಪ, ಮಹಾನಗರ ಪಾಲಿಕೆ ಕಾರ್ಪೊರೇಟರ್ ಹನುಮಂತಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ನಾಯ್ಕ, ಉಪಾಧ್ಯಕ್ಷ ವಾಸುದೇವ್,ಪದಾಧಿಕಾರಿಗಳಾದ ಶಿವನಾಯ್ಕ್, ರಮೇಶ್, ತಿಪ್ಪಾರೆಡ್ಡಿ, ದಮ್ಮೂರು ವೀರೇಶ್, ಸಿ ಹನುಮಂತಪ್ಪ, ರಿಜ್ವಾನ್, ರಾಘವೇಂದ್ರ, ನಂದೀಶ್, ಹನುಮಂತಪ್ಪ ನಿವೃತ್ತ ಮುಖ್ಯ ಗುರು ಎಂ.ಟಿ ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಾದವ ಅನಂತಕುಮಾರ, ಶ್ರೀಮತಿ ಮಲ್ಲಮ್ಮ ಮತ್ತು ದೇವರಾಜ್ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಪೂರ್ವ ವಲಯದ ನಿವೃತ್ತ ಶಿಕ್ಷಕ ಪ್ರಭು ಎಸ್. ಸಿ ಸೇರಿದಂತೆ ಹಲವರನ್ನು ಸತ್ಕರಿಸಿ ಗೌರವಿಸಲಾಯಿತು.
ಶಿಕ್ಷಣ ಸಂಯೋಜಕ ಗೂಳಪ್ಪ ಬೆಳ್ಳಿಕಟ್ಟೆ ನಿರ್ವಹಿಸಿದರು.
*****