ಲೇ ಧನುವೇ ದೊಡ್ಡ “ಆ ” ಅಂದರ ಸಣ್ಣ” ಅ”ನ ಪಾಟಿ ತುಂಬಾ ಬರೆಯೋದಲ್ಲಲೇ ..ಪಶುವೇ..! – ಎ ಎಂ ಪಿ ವೀರೇಶ್ವಸ್ವಾಮಿ, ಬಳ್ಳಾರಿ

ಸೆ.5, ಶಿಕ್ಷಕರ ದಿನಾಚರಣೆ. ಈ ಹಿನ್ನಲೆಯಲ್ಲಿ ತಮಗೆ ವಿದ್ಯೆ ಕಲಿಸಿದ ಮೇಷ್ಟ್ರುಗಳನ್ನು ಸ್ಮರಿಸಿ‌ಕೊಂಡಿದ್ದಾರೆ….ಬಳ್ಳಾರಿಯ ಪಿಯು ಕಾಲೇಜ್ ಒಂದರಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಎಎಂ‌ಪಿ ವೀರೇಶ್ ಸ್ವಾಮಿ ಅವರು…👇

ನಮ್ಮ ಮೇಷ್ಟು ಅಂದರೆ ನಮಗೆ ಒಂಥರಾ ಭಯ, ಮನದಲಿ ಅದೇನೋ ಗೌರವ,ಒಬ್ಬಬ್ಬ ಶಿಕ್ಷಕರು ನಮಗೊಂದು ವಿಶ್ವಕೋಶ, ಅವರ ಅನುಭಾವದ ನುಡಿಗಡಣಗಳೆ ನಮಗಿಂದು ಶೀರಕ್ಷೆ…
“ಲೇ ಧನುವೇ ದೊಡ್ಡ “ಆ ” ಅಂದರ ಸಣ್ಣ” ಅ”ನ ಪಾಟಿ ತುಂಬಾ ಬರೆಯೋದಲ್ಲಲೇ ..ಪಶುವೇ.. ದೊಡ್ಡ ಆ ಕ್ಕ ಗಂಟು ಹೊರಗ ಬರತೈತಿ ಅಂತ ತಿಳಿಸಿ ಕೈಹಿಡಿದು ಅಕ್ಷರಗಳ ರಂಗೋಲಿ ಕಲಿಸಿದ ಶ್ಯಾನಬೋಗರ ಶಂಕ್ರಪ್ಪ ಮೇಷ್ಟ್ರೇ ನಿಮಗಿದೋ ಶರಣು..
ಅ -ಅಗಸ ,ಆ -ಆಟ,ಇ-ಇಲಿ …ಕ -ಕಮಲ,ಖ-ಖಡ್ಗ…ಎಂದು ನಮ್ಮ ತೊದಲು ನುಡಿಗೊಂದು ಸ್ಪಷ್ಟತೆಯ ಕನ್ನಡಿ ಹಿಡಿದು ಅಲ್ಪಪ್ರಾಣ ಮಹಾಪ್ರಾಣಗಳ ವ್ಯತ್ಯಾಸ ತಿಳಿಸಿದ ಯು ಎಂ ಶಿವದೇವಪ್ಪ ಮೇಷ್ಟ್ರೇ ನಿಮಗಿದೋ ಶರಣು
ಕ ತಲೆಕಟ್ಟು ಕ ,ಕ ದೀರ್ಘ ಕಾ..,ಕ ಗುಡಿಸಿ ಕಿ…. ಕ ಗುಡಿಸಿ ಮುಂದ ಇಳಿ ಕೀ..ಕ ಕೊಂಬು ಕು…ಕ ಕೊಂಬಿನ ಮುಂದ ಇಳಿ ಕೂ..ಕ ವಟ್ರ ಸುಳಿ ಕೃ..ಕ ಎತ್ವ ಕೆ..ಕ ಎತ್ವದ ಮುಂದಿಳಿ ಕೇ..ಕ ಐತ್ವ ಕೈ..ಹೀಗೆ ಕನ್ನಡದ ಬಳ್ಳಿಯನು ನನ್ನದೆಯಾಳದಲಿ ಶಾಶ್ವತವಾಗಿ ನೆಲೆಗೊಳಿಸಿದ ಮೋರಗೇರಿ ಬಸಪ್ಪ ಮೇಷ್ಟ್ರೇ ನಿಮಗಿದೋ ಶರಣು..
ಎಲ್ಟವಂದ್ಲೆ ಎಲ್ಡು.ಎಲ್ಡ್ಯಾಡ್ಲೆ ನಾಕು..ಎಲ್ಡ ಮೂರ್ಲಾರು..ಹೀಗೆ ಮಗ್ಗಿಯನು ಹಿಗ್ಗಿನಿಂದ ಬಾಯಿಪಾಠ ಮಾಡಿಸಿ..ಸುಗ್ಗಿಯ ಸಡಗರದಂತೆ ಅಬ್ಬರಸಿ ಬೊಬ್ಬಿರಿಯುವಂತೆ ಹೇಳಿಸಿ ನಮ್ಮ ಕಂಠತ್ರಾಣವನ್ನ ಗಟ್ಟಿಗೊಳಿಸಿದ ಹೆಚ್ ಸದಾಶಿವಪ್ಪ ಮೇಷ್ಟ್ರೇ..ನಿಮಗಿದೋ ಶರಣು..
ಗಾಳಿ ಗಾಳಿ ಗಂಗಾಳಿ ಮಾವಿನ ಕೊಂಬೆ ಅಲ್ಲಾಡಿ..
ನಮ್ಮ ಮನೆಯಲೊಂದು ಸಣ್ಣ ಪಾಪ ಇರುವುದು
ಎತ್ತಿಕೊಳಲು ಹೋದರದಕೆ ಕೋಪ ಬರುವುದು…
ಇರುವೆ ಇರುವೆ ಕರಿಯಾ ಇರುವೆ
ಎಲ್ಲಿಗೆ ಹೊರಟಿರುವೆ .. ಹೀಗೆ ಕನ್ನಡದ ಪ್ರಾಸ ಪದ್ಯಗಳನು ತ್ರಾಸಾಗದಂತೆ ಹೇಳಿ ,ಹೇಳಿಸಿ ಇಂದಿಗು ನೆನಪಿನಂಗಳದಲಿ ಉಳಿಸಿದ ಬೆಟಗೇರಿ ಕೊಟ್ಟಪ್ಪ ಮೇಷ್ಟ್ರೇ..ನಿಮಗಿದೋ ಶರಣು..
ರೇನ್ ರೇನ್ ಗೋ ಅವೆ ದಿಸ್ ಈಜಿ ಮದರ್ ವಾಷಿಂಗ್ ಡೇ ಕಮ್ ಅಗೇನ್ ಅನದರಡೆ… ಕನ್ನಡದ ನಾಲಿಗೆಯ ಮೇಲೆ ಇಂಗ್ಲೀಷಿನ ರೈಮ್ಸ್ ಹೇಳಿಸಿದಾಗ ರೋಮಾಂಚನ ,ಕನ್ನಡದ ಪಾಟಿಯ ಮೇಲೆ ಇಂಗ್ಲಿಷಿನ A B C D ಬರೆದಾಗ ವಿಶ್ವವನ್ನೇ ಗೆದ್ದ ಸಂತೋಷ .. ಸಾಯಂಕಾಲ ನಾಕು ಗಂಟೆಯಿಂದ ಐದರವರಗೆ ಹಿಡ್ತ ವಡ್ತದ ಕಾರ್ಯಕ್ರಮ ಲೇ ನಾಕಣಿ ಸೇರು ಗುಳುಗುಳಿ ಹತ್ತ ಸೇರೆಗೆ ಎಷ್ಟಾತು ..ಸಾ..ನಾ ಹೇಳ್ತಿನಿ..ಹೇಳಲೆ ಕಟ್ಟಾಣಿ..ಸಾ ೨ರೂ.೫೦ ಪೈಸೆ ,ವೆರಿಗುಡ್ ,ಇವರನೆಲ್ಲಾ ಸೀಟಗೆಳಿ ಹೇಳದೆ ಇರುವವರ ಮೂಗು ಹಿಡಿದು ಕಪಾಳಕ್ಕೊಡಿಯೋದು..
ಇಂತಹ ಸೃಜನಶೀಲತೆ ಶಿಸ್ತು ತಾಳ್ಮೆ, ಸಮಯ ಪ್ರಜ್ಞೆ ಸಂಯಮ,ಜೀವನ ಪ್ರೀತಿ ,ಬಾಳಿಗೊಂದು ನೀತಿ,ಕಲಿಸಿ ನಮ್ಮ ಎದೆಯ ಬಾಂದಳವನ್ನ ಚಂದಿರನಂತೆ ಬೆಳಗಿದ ಬಿ.ಎಂ ಚನ್ನಯ್ಯ ಮೇಸ್ಟ್ರೇ ನಿಮಗಿದೋ ಶರಣು..
ಜಲಜನಕ + ಆಮ್ಲಜನಕ = ನೀರು , ಸೂರ್ಯನಲ್ಲಿ ಏಳು ಬಣ್ಣಗಳಿವೆ ,ಕಾಂತೀಯ ವಸ್ತುಗಳು ಅಕಾಂತೀಯ ವಸ್ತುಗಳು,ಸಾವಯವ ರಸಾಯನಶಾಸ್ತ್ರ ನೀರಯವ ರಸಾಯನಶಾಸ್ತ್ರ, ಹೀಗೆ ವಿಜ್ಞಾನದ ಪರಿಕಲ್ಪನೆ ಮೂಡಿಸಿ ನಮ್ಮಲ್ಲಿಯ ಅಜ್ಞಾನವ ತೊಲಗಿಸಿ ಸುಜ್ಞಾನವ ಕರುಣಿಸಿದ ಕರಣಂ ವಿರುಪಾಕ್ಷಪ್ಪ ಮೇಸ್ಟ್ರೇ ನಿಮಗಿದೊ ಶರಣು
ಪೇಡಕ ನೀಚೆ ಕ್ಯಾ ಹೈ ? ಪೇಡ್ ಕೆ ನೀಚೆ ಗಾಯ್ ಹೈ. ಹೀಗೆ ಮೊದಲ ಬಾರಿಗೆ ಹಿಂದಿಯನು ನಲಿಯುತ ಉಲಿಯುವ ಹಾಗೆ ಹಿಂದಿಯನು ಕಲಿಸಿ ನಮ್ಮ ಜ್ಞಾನದ ಬಂಡಿಯನು ಮುಂದಕ್ಕೋಡಿಸಿದ ಭಾವಿಹಳ್ಳಿಯ ಕೊಟ್ರಗೌಡ ಮೇಸ್ಟ್ರೇ ನಿಮಗಿದೋ ಶರಣು..
ಲೇ ಪ್ಯಾಲಿ.. ನೀಟಾಗಿ,ವೈನಾಗಿ,ಸಿಸ್ಟಮ್ಯಾಟಿಕ್ ಆಗಿ ಬರಿ ಇದು ಗುಣ್ಯ, ಇದು ಗುಣಕ, ಇದು ಗುಣಲಬ್ಧ,ಇದು ವೃತ್ತ ಇದು ಪರಿವೃತ್ತ ಇದು ತ್ರಾಪಿಜ್ಯ. ಇದು ಭಾಹು,ಇದು ತ್ರಿಭುಜ, ಹೀಗೆ ಗಣಿತದ ಮೂಲಾಂಶಗಳನು ಸ್ವಲ್ಪವು ಲವಲೇಶವಾಗದಂತೆ ಕಲಿಸಿ ನಮ್ಮವಿದ್ಯಾರ್ಥಿ ಜೀವನದ ಲೆಕ್ಕವನ್ನ ಕೂಡಿಸಿ ಕಳೆದು ಗುಣಿಸಿ ಭಾಗಿಸಿ,ಬದುಕಿನ ವೃತ್ತಕ್ಕೆ ಅರ್ಥವನ್ನ ಕೊಟ್ಟು ಅದಕ್ಕೊಂದು ಭದ್ರಬುನಾದಿ ಹಾಕಿದ ಎ.ಜಿ ರುದ್ರಗೌಡ ಮೇಷ್ಟ್ರೇ ನಿಮಗಿದೋ ಶರಣು..
ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತು ನಮೋಸ್ತುತೇ ..
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ ಎಂದು ಸುಶ್ರಾವ್ಯ ವಾಗಿ ಹಾಡುವುದನ್ನು,ರಾಮಾಯಣ ಮಹಾಭಾರತದ ಕಥೆಯನ್ನ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ..ಬದುಕನ್ನ ಒಂದು ಚೆಂದದ ಹಾಡನ್ನಾಗಿಸಿದ ಹೆಚ್ ಎಂ ಚನ್ನಯ್ಯ ಮೇಷ್ಟ್ರೇ ನಿಮಗಿದೋ ಶರಣು..
ನೆಪೋಲಿಯನ್‌ ಬೊನೊಪಾರ್ಟಿ, ಟೀ ಬೋಸ್ಟನ್ ಚಹಾ ಕೂಟ ,ಕೆಂಪಂಗಿದಳ, ರಕ್ತ ಮತ್ತು ಕಬ್ಬಿಣ ನೀತಿ ಹೀಗೆ ಯುರೋಪಿನ ಇತಿಹಾಸವನ್ನ ಕಥೆಮಾಡಿ ಹೇಳುತ್ತಾ..ನಮ್ಮಲ್ಲಿ ಇತಿಹಾಸ ಪ್ರಜ್ಞೆಗೆ ಲಾಟೀನು ಹಿಡಿದ ಲಟಾನಿ ಈರಣ್ಣ (ಎಂ ವೀರಪ್ಪ) ಮೇಷ್ಟ್ರೇ ..ನಿಮಗಿದೋ ಶರಣು..
ಅಕ್ಷಾಂಶ, ರೇಖಾಂಶ, ಭೂಮದ್ಯರೇಖೆ, ಹುಲ್ಲುಗಾವಲುಳು ,ನೈಸರ್ಗಿಕ ಪ್ರಸ್ಥಭೂಮಿ, ಪರ್ವತಗಳು ಸಾಗರಗಳು ನದಿ ಮುಖಜ ಭೂಮಿ ಹೀಗೆ ಭೂಗಳದ ಜಗಳವನು ನಮ್ಮ ಮೆದುಳಿಗೆ ಜಳಕ ಮಾಡಿಸಿ ನಮ್ಮಕಲಿಕೆಗೊಂದು ಗುರಿ ತೋರಿದ ಗುರುಬಸಪ್ಪ (ಮುಖ್ಯ ಗುರುಗಳು)ಮೇಷ್ಟ್ರೇ.. ನಿಮಗಿದೊ ಶರಣು..
ಬಯ ಮೂಡಿಗಾ ಬಯೇ ಮೂಡ್ , ದೈನೆ ಮೂಡಿಗಾ ದೈನೇ ಮೂಡ್ ,ಹಾಥ್ ನೀಚೆ ಎಂದು ಕಾಷನ್ ಕೊಡುತ್ತಾ,ಲೇ ಜಾಲಿ ಕ್ವಾಲ್ಡನಂಥವನೆ ಸರಿಯಾಗಿ ಬಗ್ಗು ಮೂಗು ನೆಲ ಮಟ್ಟಬೇಕು ,ಎಂದು ಬೈಯುತ್ತಾ ನಮ್ಮ ದೇಹವನ್ನು ರಬ್ಬರ್ನಂತೆ ಮೃದುಗೊಳಿಸಿ ನಮ್ಮನ್ನ ಮಿದುಗೊಳಿಸಿದ ನಮ್ಮ ಪಾಲಿನ ಅಶೋಕ ಚಕ್ರವರ್ತಿಯಾಗಿದ್ದ ಶೋಕತ್ ಅಲಿ ಮೇಸ್ಟ್ರೇ.. ನಿಮಗಿದೋ ಶರಣು..
ಹೀಗೆ ಒಬ್ಬಬ್ಬ ಶಿಕ್ಷಕರು,ಒಂದೊಂದು ಅನರ್ಘ್ಯ ರತ್ನ..ತಮ್ಮ ಅನುಭವವನ್ನ ಧಾರೆಯೆರೆದು ನನ್ನ ಬಾಳ ಬಾಂದಳಕೆ ಬೆಳಕನಿಟ್ಟು ತೂಗಿದವರು,ಇವರಿಗೆ ಬೇರೆ ಹೆಸರು ಬೇಕೆ “ಮೇಸ್ಟ್ರೇ “ಅಂದರಷ್ಟೆ ಸಾಕೆ…ಮತ್ತೊಮ್ಮೆ ನನ್ನೆಲ್ಲಾ ಗುರುಗಳಿಗೆ ವಂದನೆ ಅಭಿನಂದನೆ…

-ಎ ಎಂ ಪಿ ವೀರೇಶ ಸ್ವಾಮಿ, ಕನ್ನಡ ಉಪನ್ಯಾಸಕರು, ವೀವಿ ಸಂಘದ ಸ್ವತಂತ್ರ ಪಿಯು ಕಾಲೇಜ್, ಬಳ್ಳಾರಿ

One thought on “ಲೇ ಧನುವೇ ದೊಡ್ಡ “ಆ ” ಅಂದರ ಸಣ್ಣ” ಅ”ನ ಪಾಟಿ ತುಂಬಾ ಬರೆಯೋದಲ್ಲಲೇ ..ಪಶುವೇ..! – ಎ ಎಂ ಪಿ ವೀರೇಶ್ವಸ್ವಾಮಿ, ಬಳ್ಳಾರಿ

Comments are closed.