ಅನುದಿನ ಕವಿತೆ-೨೪೮, ಕವಿ: ವಿಜಯಕಾಂತ ಪಾಟೀಲ್, ಹಾನಗಲ್ ಕವನದ ಶೀರ್ಷಿಕೆ: ನಮಸ್ಕಾರ ಕಣೇ…

ನಮಸ್ಕಾರ ಕಣೇ..!

ಎಲ್ಲ ಹೊತ್ತಿನಲೂ
ಪರಸ್ಪರ ಕಾಡುವ
ಕಾದಾಡುವ ನಾನು ನೀನು
ಖಂಡಿತ ಈ ಲೋಕದ
ಪ್ರೇಮಿಗಳಲ್ಲ!

ಬೇಡ, ಬೇಕುಗಳ ಅರ್ಥವೇ
ಉಲ್ಟಾ ಆಗಿದ್ದರೂ..
ಅಸಾಧ್ಯವೇ ಎಲ್ಲ ಕಾಲಕ್ಕು
ಸಲ್ಲುವ ಸಾರ್ವಕಾಲಿಕ ಸತ್ಯ;
ನಮ್ಮಿಬ್ಬರ ಮಟ್ಟಿಗೆ‌ ಈ ಇದು
ಅದೆಷ್ಟೊಂದು ತಥ್ಯ..!

ಇದೆಲ್ಲ ಯಾಕೆ ಬೇಕಿತ್ತು,
ಇದ್ದೂ ಸಾಯಲಿಕ್ಕೋ
ಸತ್ತೂ ಇರಲಿಕ್ಕೋ
ಮುತ್ತಿಯೂ
ಮೆಟ್ಟಲಿಕ್ಕೋ
ಹಚ್ಚಿಕೊಂಡೂ
ಕಿಚ್ಚಾಗಲಿಕ್ಕೋ?

ಅಂತರವೇ
ಪ್ರೀತಿ ಮೋಹ
ಎಂದಾಗುವುದಾದರೆ..
ನಾ ನೀ
ನೀ ನಾ
ಅಂಬುವ ಈ ಮರುಳು
ಜಾತ್ರೆಯೇಕೆ;
ತೇರು ಎಳೆಯುವಾಗ
ಬಾಳೆಹಣ್ಣು ತೂರೆಸೆದು
ಹಲ್ಲು ಕಿಸಿಯುವುದೇಕೆ?
ಕೇಕೆ ಹಾಕಿ ಕುಣಿದು
ಕುಪ್ಪಳಿಸುವುದೇಕೆ?
ನುಲಿದು ನಲಿದು ವನೆದು
ಕಾಳು ಜಾರಿಸುವುದೇಕೆ?

ಯವ್ವಾ,
ತಾಯೀ…
ಈಗ ನಾ ಪಕ್ಕಾ ಮಾಡಿಕೊಂಡೆ;
ನೀ ಪ್ರೇಮಿಯಲ್ಲ ಕಣೇ,
ತಾಯೀ ಮಾತಾಯಿ
ಮಮತೆಯಿದ್ದೂ
ಮತಿಗೆಡದಂತೆ ಗುಟ್ಟಾಗಿ ಕಾಪಿಟ್ಟು ಕಾಯ್ವ
ಮಾಯೇ…
ಸಾಯದಂತೆ
ಉರಿಸಿ ಕುದಿಸಿ ಸೋಸಿ
ಕುಡಿಸುವ ಕೊರೊನಾ ಕಾಲದ
ಕಷಾಯೀ…!

ನಮಸ್ಕಾರ ಕಣೇ…
ಎರಡು ಸಾವಿರದ
ಇಪ್ಪತ್ತೊಂದು
ಶರಣು ಶರಣಾರ್ಥಿಗಳು..!

-ವಿಜಯಕಾಂತ್ ಪಾಟೀಲ್, ಹಾನಗಲ್
*****