ಇಂದು (9 ಸೆಪ್ಟೆಂಬರ್ 2021) ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬರಾದ ಬಿ. ಆರ್. ಲಕ್ಷ್ಮಣರಾವ್ ಅವರಿಗೆ 75 ತುಂಬುತ್ತಿದೆ. ಇವರು ನನ್ನ ಗುರುವೂ ಹೌದು. ಏಕವಚನದ ಆತ್ಮೀಯ ಮಿತ್ರನೂ ಹೌದು. ಈ ಸಂದರ್ಭದಲ್ಲಿ ನಮ್ಮಿಬ್ಬರಿಗೂ ಪ್ರಿಯವಾದ ಕ್ರಿಕೆಟ್ ಆಟದ ರೂಪಕದೊಂದಿಗೆ ಆರಂಭವಾಗುವ ಒಂದು ಕಾವ್ಯ ಕಾಣಿಕೆ!
-ಎಚ್.ದುಂಡಿರಾಜ್👇
ಬಿ.ಆರ್ ಲಕ್ಷ್ಮಣರಾವ್-೭೫….
ಚಾಣಾಕ್ಷ ಸ್ಪಿನ್ನರುಗಳ ತಿರುಗು ಚೆಂಡಿನ
ಮೋಡಿಗೆ ಮೋಸ ಹೋಗದೆ
ಮುಖಕ್ಕೇ ಗುರಿಯಿಟ್ಟು ಬೆಂಕಿಯುಂಡೆ ಎಸೆವ
ಮುಖೇಡಿಗಳಿಗೆ ಅಂಜಿ ತಲೆ ಬಾಗದೆ
ಸಿದ್ಧಾಂತದ ಶಿರಸ್ತ್ರಾಣ ಧರಿಸದೆ
ದಾಖಲೆಗಳಿಗಾಗಿ ಅವಸರಿಸದೆ
ಆಡುತ್ತಿದ್ದಾನೆ ಆತ್ಮವಿಶ್ವಾಸದಿಂದ
ಸಿಕ್ಕರೆ ಸಾಕೆಂದು ಕಾಯುತ್ತ ಸಾಲಾಗಿ
ನಿಂತ ಕೊಕ್ಕರೆಗಳಿಗೆ ಅಳುಕದೆ
ಒತ್ತಡಕ್ಕೆ ಸಿಲುಕದೆ
ತನ್ನ ಪಾಡಿಗೆ ತಾನು ಹಾಯಾಗಿ
ಆಡುತ್ತ ಬಂದಿದ್ದಾನೆ
ಉಸಿರಾಡಿದಷ್ಟು ಸಹಜವಾಗಿ
ಕಾಯಿ ಹಣ್ಣಾಗುವಂತೆ ಮಾಗಿ
ಮುನ್ನಡೆದಿದ್ದಾನೆ ಕಾವ್ಯಕ್ರೀಡೆಯಲ್ಲಿ
ಅರ್ಧ ಶತಕ ದಾಟಿ, ಸ್ಥಾಪಿಸಿದ್ದಾನೆ
ಅವನದೆ ವಿಶಿಷ್ಟ ಲಯ, ಧಾಟಿ
ತುಂಟ, ಪೋಲಿ ಎಂದೆಲ್ಲ
ಬಯ್ಯುವವರು ಬೈಲಿ( ಅದು ಲೆಗ್ ಬೈ)
ನನ್ನ ಶೈಲಿ ಇದೋ ಹೀಗೆ ಎಂದು
ಆಡಿ ತೋರಿಸಿದ್ದಾನೆ ಮಾತಾಡದೆ
ಸೀಮೆ ದಾಟಿದ ಹಲವು ಅತ್ಯುತ್ತಮ
ಇಡಿಗವನಗಳ ಎಡೆಯಲ್ಲಿ
ಬಿಡಲಿಲ್ಲ ಹನಿಗವನ, ಭಾವಗೀತೆಗಳ
ಒಂಟಿ , ಅವಳಿ , ತ್ರಿವಳಿ
ಬೌಂಡರಿ ಬಾರಿಸಿದಾಗ, ಸಿಕ್ಸರ್ ಎತ್ತಿದಾಗ
ವಿಜಯೋತ್ಸಾಹದ ನಗೆ ಬೀರಲಿಲ್ಲ
ಔಟಾದಾಗ ಪೆಚ್ಚಾಗಿ ಪಿಚ್ಚನ್ನು ದೂರಲಿಲ್ಲ
ತಲೆಗೇರಲಿಲ್ಲ ಜನಪ್ರಿಯತೆಯ ಮತ್ತು
ತನ್ನ ಇತಿಮಿತಿಗಳನ್ನು ಚೆನ್ನಾಗಿ ಅರಿತು
ಟೀಕೆ ಟಿಪ್ಪಣಿಗಳ ಗರಳ
ನಗುನಗುತ್ತ ನುಂಗಿದ ‘ಗಿರಿಜಾ’ * ವಲ್ಲಭ
ನೀಡಿದ್ದಾನೆ ‘ಹರ್ಷ’ ‘ ಸಂತೋಷ’
ಮಾಡಿದ್ದಾನೆ ಕಾವ್ಯಯಾನದಲ್ಲಿ
ಅಪಾರ ಸ್ನೇಹ ಲಾಭ
ತೋರಿಕೆಯ ಮಹತ್ವಾಕಾಂಕ್ಷೆ ತೊರೆದು
ಸಾಮಾನ್ಯನಂತೆ ಲಘುವಾಗಿ ಬರೆದು
ಒಳಗೊಳಗೆ ಮಹಾಲಿಂಗನನ್ನೆ ಒಳಗೊಳ್ಳುವ
ಲಿಲ್ಲಿಪುಟ್ಟಿಯ ಹಂಬಲ
ದಾರಿ ಹಲವು ಗುರಿ ಶಾಂಗ್ರಿ-ಲಾ
ಸದಾ ಹೊಸದನ್ನು ಹುಡುಕುವ
ಕೊಲಂಬಸ್ ಛಲ
ರಮ್ಯವೆ? ನವ್ಯವೆ? ಅಥವಾ ನವ್ಯೋತ್ತರ?
ವಾದವೇಕೆ ವರ್ಗೀಕರಣ ಪ್ರಿಯರ ಹತ್ತಿರ?
ಸರಳವಾಗಿದ್ದರೂ ಹೃದಯದಾಳಕ್ಕೆ ಇಳಿದು
ಅಲ್ಲೇ ಉಳಿದು ಬಿಡುವ
ಕವಿತೆಯೇ ಇವನ ಉತ್ತರ
ಅಳೆಯಲಾಗದು ಪ್ರೀತಿಯ ಆಳ, ಅಗಲ
ಎಳೆಯಲಾಗದು ಇವನ ಕಾವ್ಯಕ್ಕೆ ಲಕ್ಷ್ಮಣರೇಖೆ!
***
ಗೋಪಿ, ಗಾಂಡಲೀನರಿಗೆ ಐವತ್ತಾದರೂ
ಕವಿಗೆ ಎಪ್ಪತೈದಾದರೂ ಕವಿತೆಗೆ ಮುಪ್ಪಿಲ್ಲ
ನವೋನ್ಮೇಷದ ಕವಿತೆ ಬರೆಯಲು
ಹುಡುಕಬೇಕಿಲ್ಲ ಹಾಳೆ
ಲೋಲೀಟ ಮತ್ತೆ ಬಂದಿದ್ದಾಳೆ
ತೆರೆದಿಟ್ಟಿದ್ದಾಳೆ ಖಾಲಿ ನೋಟ್ ಬುಕ್ಕಿನ ಪುಟ
ಬರುತ್ತಲೇ ಇರಲಿ ಹೊಸ ಕಾವ್ಯ ಸಂಪುಟ
ಪದ್ಯವಂತರಿಗಿದು ಒಳ್ಳೆ ಕಾಲ
ಕವಿ ಲಕ್ಷ್ಮಣನಂತೆ ಬರೆದರೆ
ಎಲ್ಲರೂ ಏಕವಚನದ ಮಿತ್ರರೆ
ಅವನಂತೆ ಹೃದಯ ತೆರೆದರೆ
ಗುರು ಗೆಳೆಯ ಲಕ್ಷ್ಮಣ ಕೈಕುಲುಕುತ್ತ
ಪ್ರೀತಿ ತುಂಬಿ ತುಳುಕುತ್ತ
ಇರಲಿ ನಮ್ಮೊಂದಿಗೆ ನೂರ್ಕಾಲ
-ಎಚ್. ಡುಂಡಿರಾಜ್,
ಹಿರಿಯ ಕವಿಗಳು, ಬೆಂಗಳೂರು
(ಗಿರಿಜಾ ಲಕ್ಷ್ಮಣರಾವ್ ಅವರ ಪತ್ನಿ. ಹರ್ಷ, ಸಂತೋಷ ಮಕ್ಕಳು)
*****