ಕವಯತ್ರಿ ಅಪೂರ್ವ ಹಿರೇಮಠ ಅವರು ಹಿರಿಯ ಕವಿ ಸಿದ್ಧರಾಮ ಕೂಡ್ಲಿಗಿ ಅವರ ಪುತ್ರಿ. ತಮ್ಮ ಪುತ್ರಿಯ ಅಕ್ಷರ ಪಯಣದ ಕುರಿತು ಸಿದ್ಧರಾಮ ಕೂಡ್ಲಿಗಿ ಅವರು ಬರೆದ ಟಿಪ್ಪಣಿ ಅಪ್ಯಾಯಮಾನ….👇
“ಮಗಳಿಗೆ ಚಿಕ್ಕಂದಿನಿಂದಲೂ ಕವಿತೆ ಬರೆಯುವ ಹುಮ್ಮಸ್ಸು. ಈಗಲೂ ಅವಳ ಬಾಲ್ಯದ ಅನೇಕೆ ಪುಟ್ಟ ಕವಿತೆಗಳಿವೆ. ಇತ್ತೀಚೆಗೆ ಬರೆಯುವುದು ಕಡಿಮೆಯಾಗಿದೆ ಅಷ್ಟೆ. ಆದರೂ ತನಗೆ ಬರೆಯಬೇಕೆಂಬ ಒಳತುಡಿತ ಉಂಟಾದಾಗ ಚಂದ ಬರೆಯುತ್ತಾಳೆ. ಅದು ಅವಳ ತುಡಿತ. ನನ್ನಿಂದ ಏನನ್ನೂ ಹೇಳಿಸಿಕೊಳ್ಳದೇ ತನ್ನ ಆಲೋಚನೆ, ಭಾವ, ಮನಸಿಗೆ ನಿಲುಕಿದ್ದನ್ನು ಅಕ್ಷರಗಳ ರೂಪದಲ್ಲಿಳಿಸುತ್ತಾಳೆ. ಅವಳು ಬರೆದದ್ದೆಲ್ಲ ಚಂದ, ಉತ್ತಮವಾದ ಕವಿತೆ ಅಂತ ಹೇಳುವುದಿಲ್ಲ. ಆದರೆ ಆಕೆಗೆ ಮನದ ಭಾವಗಳನ್ನು ಹಿಡಿದಿಡುವ ಹುಮ್ಮಸ್ಸಿದೆಯಲ್ಲ ಅದು ನನಗೆ ಖುಷಿ ಕೊಡುತ್ತೆ. ಯಾಕೆಂದರೆ ಸ್ವತ: ಕವಿತೆಗಳನ್ನು ಬರೆಯುವ ನನಗೆ ನನ್ನ ಮಗಳೂ ಬರೀತಿದಾಳೆ ಅನ್ನೋದೇ ಖುಷಿ. ತಂದೆಯಾದವನಿಗೆ ಇದಕ್ಕಿಂತ ಹೆಚ್ಚಿನ ಸಂತೋಷ ಏನಿದೆ. ಆಕೆಯೇ ಬರೆದ ಕವನ ಒಮ್ಮೆ ಓದಿ ನೋಡಿ”
ಅವಳು ಹೂವು….
ತನ್ನೆಲ್ಲಾ ದಳಗಳ ತೆರೆದು,
ಆಗಸದೆತ್ತರಕ್ಕೆ ತದೇಕ ಚಿತ್ತದಿ ನೋಡುತಾ,
ಎಲ್ಲೆಡೆ ಸುಗಂಧ ಪಸರಿಸುತಾ
ಚಂದದಿ ನಗುತಾಳೆ.
–
ತಂಗಾಳಿಗೆ ನಾಚಿ ನೀರಾಗಿ
ಕೋಮಲ ದಳಗಳ ಒಂದಕ್ಕೊಂದು ತಾಕಿಸಿ,
ಅತ್ತಿತ್ತ ವಾಲುತ
ಎಲೆಗಳ ಹಿಂದೆ ಅವಿತು ಕೂಡುತ್ತಾಳೆ.
–
ಉರಿ ಬಿಸಿಲಿಗೆ
ಕೊಂಚ ಕಮರಿದಂತಾದ ದಳಗಳ ಹಿಡಿದು,
ಒಂದೇ ಉಸಿರಿನಲಿ
ತಣ್ಣನೆಯ ನೆರಳಿಗಾಗಿ ಎದಿರು ನೋಡುತ್ತಾಳೆ
–
ಸೋನೆ ಮಳೆಗೆ ಮೆತ್ತಗಾಗಿ,
ನೀರು ಬೆರೆತ ಹತ್ತಿಯಂತಾಗಿ,
ಬಿಸಿಲಿನ ಒಂದು ಕಿರಣಕ್ಕಾಗಿ,
ಗದ ಗದ ನಡುಗುತ್ತಾ ಕಾಯುತ್ತಾಳೆ.
–
ಮೊನ್ನೆ ಬಿರುಗಾಳಿ,
ನಿನ್ನೆ ಬಿರು ಬಿಸಿಲು,
ನಾಳೆ ಮಳೆಯ ಮುನ್ಸೂಚನೆ
ಈ ಕ್ಷಣದ ಬದುಕು ಅವಳದು.
-ಅಪೂರ್ವ ಹಿರೇಮಠ, ಬೆಂಗಳೂರು
*****