ಎಕ್ಕಲಮ್ಮಾ….
ನೀನಿರುವಲ್ಲಿ
ಜೀವಜಲವಂತೆ
ನಿನ್ನನ್ನೇ ಕತ್ತರಿ ಮಾಡಿ
ದಿಕ್ಕು ದಿಕ್ಕಿಗೆ ಹಿಡಿದು
ಮತ್ತೆ ನಿನ್ನ ತಾವಿಗೇ ಮೂಡಿನಿಂತು
ಉಕ್ಕಲಿಲ್ಲವೇ ನನ್ನ ಬಾಲ್ಯದ ಜಲ!
ನಿನ್ನ ಎಲೆಮುಚ್ಚಿದ ಜಲತಂಬಿಗೆ ಹಿಡಿದು
ಊರ ಸುತ್ತಿದ್ದೇ ಸುತ್ತಿದ್ದು
ಎಲ್ಲಿ ಎಲೆಯುದುರಿ ಮಣ್ಣ ಮೈಯಿ ತೋಯಿತೋ
ಅಲ್ಲಿ ಬಾಲ್ಯದ ಸಂಮೃದ್ಧಿಯ ಮಳೆ!
ಎಕ್ಕಲಮ್ಮಾ
ಆಹಾ ಎಲ್ಲಮ್ಮsss
ನಿನ್ನ ಮದುವೆಯ ಸಂಭ್ರಮವನ್ನು
ಕಣ್ಣಾರೆ ಕಂಡಿದ್ದೆನಲ್ಲ ತಾಯೇ
ನಿನಗ್ಯಾವ ಗುಡಿಯುಂಟು
ಮಠಮಾನ್ಯಗಳುಂಟು?
ನೀನಿದ್ದಲ್ಲಿಯೇ ಊರ ನೈವೇದ್ಯ
ಬಾಲ್ಯದ ಬೆರಗಿನ ಚೋದ್ಯ!?
ನಿನ್ನೆ ನಾನಿರುವಲ್ಲಿಯೇ ಪಾದಕ್ಕಂಟಿ ಬೆಳೆದವಳು
ಇಂದು ನನ್ನೆತ್ತರದ ಕಣ್ಣಮಗಳು
-ನಿಂಗಪ್ಪ ಮುದೇನೂರು, ಧಾರವಾಡ
(ಕವಿ ಮನೆ ‘ಬೆಳಗು’ ಮುಂದಿನ ಕಾಂಪೌಂಡಿಗೆ ಹತ್ತಿಕೊಂಡೇ ‘ಎಕ್ಕಲಮ್ಮ’ ಸುಖವಾಗಿ ಬೆಳೆದು ನಿಂತಿರುವಳು.)
*****