ಬಳ್ಳಾರಿಯ ಅಂತರಾಷ್ಟ್ರೀಯ ಕವಿ ಸಮ್ಮೇಳನಕ್ಕೆ ಕ್ಯೂರೇಟರ್ ಆಗಲು ಸಿದ್ಧ -ಪ್ರಸಿದ್ಧ ಕವಿ ಡಾ. ಹೆಚ್ ಎಸ್ ಶಿವಪ್ರಕಾಶ್

ಬಳ್ಳಾರಿ, ಸೆ.12: ಕರ್ನಾಟಕ ಸಾಂಸ್ಕೃತಿಕ ಇತಿಹಾಸಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆ ನೀಡಿರುವ ಕೊಡುಗೆ ಅಮೂಲ್ಯ ಎಂದು ಪ್ರಸಿದ್ಧ ಹಿರಿಯ ಕವಿ ಡಾ. ಹೆಚ್ ಎಸ್ ಶಿವಪ್ರಕಾಶ್ ಅವರು ಕೊಂಡಾಡಿದರು.
ನಗರದಲ್ಲಿ ಭಾನುವಾರ ಸ್ಥಳೀಯ ಕವನ ಪ್ರಕಾಶನ ಪ್ರಕಟಿಸಿರುವ ಅಜಯ ಬಣಕಾರ ಅವರ ‘ ಭೂಮಿ ಹಿಡಿದ ಹೂ’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶೂನ್ಯ ಸಂಪಾದನೆ, ಪ್ರಭುಲಿಂಗ ಲೀಲೆ ಅಂತಹ ಮಹತ್ವದ ಕೃತಿಗಳು ಇದೇ ನೆಲದಿಂದ ಬಂದಿವೆ. ತತ್ವ ಪದಕಾರರು, ಚೇಳ್ಳಗುರ್ಕಿ ಎರ್ರಿತಾತ, ಕೊಟ್ಟೂರಿನ ಬಸವೇಶ್ವರರಂತಹ ಅವಧೂತರು ನಾಡಿನ ಸಾಂಸ್ಕೃತಿಕ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.
ಬಳ್ಳಾರಿ ಜಿಲ್ಲೆಯ ಖ್ಯಾತ ವಿದ್ವಾಂಸ ವೈ. ನಾಗೇಶ ಶಾಸ್ತ್ರಿ, ಸಾಹಿತಿ ಬೀಚಿ, ಪ್ರಮುಖ‌ ಕತೆಗಾರರಾದ ರಾಜಶೇಖರ ನಿರಮಾನ್ವಿ, ಕೇಶವ ಮಳಗಿ, ರವಿಬೆಳಗೆರೆ ಮುಂತಾದವರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಅವರು ಎಂದು ತಿಳಿಸಿದರು.
ಕವಿತೆ ವಿದ್ವಾಂಸರು, ಮೇಷ್ಟ್ರುಗಳ ಪಾಲು, ಸ್ವತ್ತಲ್ಲ. ವಚನಕಾರರ ಯುಗದಲ್ಲಿ ಕವಿತೆಗಳನ್ನು ಚಮ್ಮಾರ, ಅಗಸ, ಕಂಬಾರ, ಕುಂಬಾರ, ರೈತ, ಡೊಳ್ಳು ಬಾರಿಸುವವ, ದನ ಕಾಯುವವರು ವಚನಗಳನ್ನು ರಚಿಸಿದಂತೆ ಎಲ್ಲರೂ ಕಾವ್ಯಗಳನ್ನು ರಚಿಸುವಂತಾಗಬೇಕು ಎಂದು ಹೇಳಿದರು.
ಸರ್ವಜ್ಞ, ವಚನಕಾರರು ಕೆಲವೇ ಸಾಲುಗಳಲ್ಲಿ ಬದುಕಿನ‌ ಅನುಭವಗಳನ್ನು ಅಭಿವ್ಯಕ್ತಿ ಗೊಳಿಸುತ್ತಿದ್ದರು ಎಂದರು.
ಹೃದಯ ತೆರೆದು ಬರೆದರೆ ಮಾತ್ರ ಒಳ್ಳೆಯ ಕವಿತೆ ಹುಟ್ಟುತ್ತವೆ ಎಂದು ಡಾ. ಶಿವಪ್ರಕಾಶ್ ಅವರು ಪ್ರತಿಪಾದಿಸಿದರು.
ಕವಿ ಅಜಯ ಬಣಕಾರ್ ಅವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಕವಿ ಸಮ್ಮೇಳನ ಆಯೋಜಿಸುವ ಇಚ್ಚೆ ವ್ಯಕ್ತಪಡಿಸಿದರು. ತಕ್ಷಣ ಸ್ಪಂದಿಸಿದ ಡಾ. ಶಿವಪ್ರಕಾಶ್ ಅವರು ಬಳ್ಳಾರಿಯಲ್ಲಿ ಸಂಘ ಸಂಸ್ಥೆಗಳು ಕವಿ ಸಮ್ಮೇಳನ ನಡೆಸಲು ಮುಂದಾದರೆ ತಾವೇ ಮಾರ್ಗದರ್ಶಿ(ಕ್ಯೂರೇಟರ್) ಆಗಲು ಸಿದ್ಧ ಪ್ರಕಟಿಸಿದರು.
ವಿದೇಶದಿಂದ ಆಗಮಿಸುವ ಕವಿಗಳು ತಮ್ಮ ಖರ್ಚಿನಲ್ಲೇ ಬಳ್ಳಾರಿಗೆ ಆಗಮಿಸುವರು. ಅವರಿಗೆ ವಾಸ್ತವ್ಯ, ಊಟೋಪಚಾರ ಹಾಗೂ ಹಂಪಿ ವೀಕ್ಷಣೆಗೆ ಅವಕಾಶ ಮಾಡಬೇಕು ಎಂದು ಹೇಳಿದರು. ಡಾ.‌ಅರವಿಂದ ಪಾಟೀಲ್ ಸೇರಿದಂತೆ ಹಲವರು ಸಮ್ಮೇಳನಕ್ಕೆ ತಮ್ಮ ನೆರವು ಇರುತ್ತದೆ ಎಂದು ಕೈಎತ್ತಿ ಬೆಂಬಲಿಸಿದರು.
ಕೃತಿ ಪರಿಚಯಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತ ಆರಿಫ್ ರಾಜ ಅವರು ಕವಿ, ಲೇಖಕ, ನಾಟಕಕಾರ ದ್ವೀಪವಾಗಿರದೇ, ಹಳ್ಳ ಕೊಳ್ಳ ಸೇರಿ ಹರಿಯುವ ನದಿಯಾಗಿರುತ್ತಾರೆ ಎಂದು ತಿಳಿಸಿದರು.
ಅಜಯ್ ಬಣಕಾರ ಅವರ ಕವಿತೆಗಳಲ್ಲಿ ಹಿಂಸೆಯ ಬಿಡುಗಡೆ ಮತ್ತು ಕಾರುಣ್ಯ ನಡುವಿನ ಒದ್ದಾಟವನ್ನು ಕಾಣಬಹುದಾಗಿದೆ. ನಮ್ಮ ತಲೆಮಾರಿನ ಲೇಖಕರು ಬಣಕಾರರಂತೆ ಯೋಚಿಸಿ ಬರೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ಪಟೇಲ್, ಡಾ. ಎಸ್ ಜೆ ವಿ ಮಹಿಪಾಲ್, ಸಾಹಿತಿ ನಿಷ್ಟಿ ರುದ್ರಪ್ಪ, ಕಸಾಪ ಮಾಜಿ ಅಧ್ಯಕ್ಷ ಹೆಚ್.‌ಹಂಪನಗೌಡ ಮತ್ತಿತರರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಾಗಟಗೆರೆ ಆನಂದ ಯೋಗ ಟ್ರಸ್ಟ್ ನ ಮಂಜುನಾಥ ಗುರೂಜಿ ಮಾತನಾಡಿದರು.
ವೀವಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕಲ್ಗುಡಿ ಮಂಜುನಾಥ ಉಪಸ್ಥಿತರಿದ್ದರು.
ಸಾಹಿತಿ ಡಾ. ಕೆ.‌ಶಿವಲಿಂಗಪ್ಪ, ಅಧ್ಯಾಪಕ ಪರಮೇಶ್ವರ ಸೊಪ್ಪಿಮಠ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಅಜಯ ಬಣಕಾರ ದಂಪತಿಯನ್ನು ಬಂಧು ಮಿತ್ರರು ಸನ್ಮಾನಿಸಿ ಗೌರವಿಸಿದರು.
*****