ಹೊಸಪೇಟೆ, ಸೆ.15: ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೆ ಹೊಸ ಕೌಶಲ್ಯ ವೃದ್ಧಿಸಿಕೊಳ್ಳುವುದು ಅತ್ಯಗತ್ಯ ಎಂದು ಬಳ್ಳಾರಿ ಬಿ.ಐ.ಟಿ.ಮ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಎಂ. ಸದ್ಯೋಜಾತ ಅವರು ಹೇಳಿದರು.
ಅವರು ಬುಧವಾರ ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಟಗೂ ಮುನಿರಾಬಾದಿನ ‘ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ’ ಸಹಯೋಗದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ೧೬೧ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ 54 ನೇ ’ಇಂಜಿನಿಯರ್ಸ್ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶೇಷ ಉಪನ್ಯಾಸ ನೀಡಿದರು.
ಕೋವಿಡ್ ಸಂದರ್ಭ ಸಂಕಟಗಳನ್ನು ತಂದಂತೆ ಅನೇಕ ಅವಕಾಶಗಳ ಬಾಗಿಲುಗಳನ್ನು ಕೂಡ ತೆರೆದಿದೆ. ಕೌಶಲ್ಯಗಳನ್ನು ಇವತ್ತಿನ ಸಂದರ್ಭಕ್ಕೆ ಅಳವಡಿಸಿಕೊಳ್ಳುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ. ಇದು ಇಂದಿನ ತುರ್ತು ಅಗತ್ಯ ಎಂದು ಪ್ರತಿಪಾದಿಸಿದರು.
ವಾಣಿಜ್ಯ, ಉತ್ಪಾದನೆ, ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳು ಡಿಜಿಟಲೀಕರಣದ ಮೂಲಕ ತಮ್ಮ ಸೇವಾ ವಲಯಗಳನ್ನು ಜಾಗತಿಕ ಮಟ್ಟಕ್ಕೆ ಚಾಚಿಕೊಂಡಿವೆ. ಅದರ ಸದುಪಯೋಗ ಪಡೆಯಬೇಕಾದಲ್ಲಿ ಆಧುನಿಕ ಆನ್ಲೈನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲೇ ಬೇಕಿದೆ ಎಂದು ತಿಳಿಸಿದರು.
ಮಾರುಕಟ್ಟೆ ಪರಿಣಿತರ ಪ್ರಕಾರ ಕೋವಿಡ್ ಸಂಕಷ್ಟಕ್ಕೆ ತಕ್ಷಣದ ಪರಿಹಾರ ಕಂಡುಕೊಳ್ಳಲು ಆಗದಿದ್ದರೂ ಕ್ರಮೇಣ ಪರಿಸ್ಥಿತಿ ಸುಧಾರಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ದಿಸೆಯಲ್ಲಿ ತಾಂತ್ರಿಕ ಪರಿಣಿತರ ಪಾತ್ರ ಬಹು ಮುಖ್ಯವಾಗಿದೆ ಎಂದರು.
ಸಮಾಜವನ್ನು ಮುನ್ನಡೆಸುವ, ಗ್ರಾಮೀಣ ಜನರನ್ನು ಕೂಡ ತಮ್ಮ ಜೊತೆಗೆ ಕರೆದೊಯ್ಯುವ ನಿಟ್ಟಿನಲ್ಲಿ ಮಾನವೀಯ ಗುಣಗಳ ರಾಯಭಾರಿಗಳಾಗಿ ತಂತ್ರಜ್ಞರು ಪಾತ್ರ ನಿರ್ವಹಿಸಬೇಕಿದೆ ಎಂದು ಪ್ರೊ. ಸದ್ಯೋಜಾತ ಹೇಳಿದರು.
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಮುನಿರಾಬಾದ್ ಘಟಕದ ಅಧ್ಯಕ್ಷ ಪ್ರಹ್ಲಾದ್ ಮಾತನಾಡಿ, ತಮ್ಮ ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ಕೂಡ ಹಲವು ವೆಬಿನಾರ್ ಸರಣಿಗಳ ಮೂಲಕ ಆಧುನಿಕ ತಾಂತ್ರಿಕ ವಿಷಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಲ್ಲಿ, ತಾಂತ್ರಿಕ ಸಮುದಾಯದ ಜೊತೆ ನಿರಂತರ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿದೆ ಎಂದು ಮಾಹಿತಿ ನೀಡಿದರು.
ಶತಮಾನ ಪೂರೈಸಿದ ಈ ರಾಷ್ಟ್ರೀಯ ಸಂಸ್ಥೆಯನ್ನು ನಿರ್ವಹಿಸುವ ಹೊಣೆಗಾರಿಕೆ ಮುಂದಿನ ಯುವ ಸದಸ್ಯರುಗಳ ಮೇಲಿದೆ ಎಂದು ಹೇಳಿದರು.
ಪಿಡಿಐಟಿಯ ಪ್ರಾಚಾರ್ಯ ಡಾ. ಎಸ್.ಎಂ.ಶಶಿಧರ್ ಮಾತನಾಡಿ, ಇಂಜಿನಿಯರುಗಳು ತಮ್ಮ ವೃತ್ತಿ ಚೌಕಟ್ಟಿನ ಆಚೆಗೆ ಸಮಾಜದ ಅಗತ್ಯಗಳಿಗೆ ಸ್ಪಂದಿಸುವಂತಹ, ತಾಂತ್ರಿಕ ಪರಿಹಾರಗಳನ್ನು ಒದಗಿಸುವತ್ತ ಗಮನ ಹರಿಸಬೇಕು. ಸಮಕಾಲೀನ ತಾಂತ್ರಿಕತೆ ಜೊತೆ ಸಮಸಮನಾಗಿ ಹೆಜ್ಜೆ ಹಾಕಿದಾಗ ಮಾತ್ರ ನಿಜವಾದ ಆರ್ಥಿಕ ಅಭಿವೃದ್ಧಿ, ಉದ್ಯೋಗ ನಿರ್ಮಿತಿ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಇಂಥ ಅನೇಕ ಸಂಕಷ್ಟದ ಸಂದರ್ಭಗಳನ್ನು ಸರ್ ಎಂ.ವಿ ಅವರು ತಮ್ಮ ಕಾಲದಲ್ಲೂ ಎದುರಿಸಿದ್ದರು. ಅದಕ್ಕೆ ಸ್ಥಳೀಯ ಪರಿಹಾರಗಳನ್ನು ನೀಡಿ, ತಾಂತ್ರಿಕತೆಯನ್ನು ಭಾರತೀಕರಣ ಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಜಾಗತಿಕ ದೃಷ್ಟಿ ಮತ್ತು ಸ್ಥಳೀಯ ಅಗತ್ಯ ಇವುಗಳನ್ನು ಸಮೀಕರಿಸುವಲ್ಲಿ ಸರ್ ಎಂ.ವಿ. ನಮಗೆ ಅತ್ಯುತ್ತಮ ಮಾದರಿ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಡಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಅವರು ಮಾತನಾಡಿ, ಸಮಾಜ ಮತ್ತು ದೇಶವನ್ನು ಕಟ್ಟುವಲ್ಲಿ ಇಂಜಿನಿಯರಿಂಗ್ ವೃತ್ತಿಪರರ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೃಜನಶೀಲತೆ, ಆವಿಷ್ಕಾರ ಹಾಗೂ ವಿಜ್ಞಾನದ ಸರಿಯಾದ ಅಳವಡಿಕೆಯಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಮುನಿರಾಬಾದ್ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷ ಪ್ರಹ್ಲಾದ್, ಕಾರ್ಯದರ್ಶಿ ಡಬ್ಲ್ಯೂ. ಲಲಿತ್ ಪ್ರಸಾದ್, ಡಾ. ಸದ್ಯೋಜಾತ ಕೆ.ಎಂ. ಅವರನ್ನು ಪಿಡಿಐಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಕು.ಶ್ರಾವಣಿ ಮತ್ತು ಅಮೃತಾ ಪ್ರಾರ್ಥಿಸಿದರು. ಡಾ.ಎ.ವಿ.ವಿಜಯಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಮುನಿರಾಬಾದನ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ಕಾರ್ಯದರ್ಶಿ ಡಬ್ಲ್ಯೂ. ಲಲಿತ್ ಪ್ರಸಾದ್ ಅವರು ಸ್ವಾಗತಿಸಿದರು. ಪ್ರೊ.ಮಧ್ವರಾಜ ಅವರು ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಧೇಯೋದ್ದೇಶಗಳನ್ನು ವಿವರಿಸಿದರು. ಡಾ.ಚಂದ್ರಗೌಡ ಅವರು ವಂದಿಸಿದರು. ಪ್ರೊ.ವೀಣಾ ಹಾಗು ಪ್ರೊ.ಬಸವರಾಜ ಅವರು ನಿರೂಪಿಸಿದರು. ಪ್ರೊ. ರಜನಿ ಉಮಾಪತಿ ಮತ್ತು ಪ್ರೊ.ಜಿ.ಸಿ.ಸುಮಾ ನಿರ್ವಹಿಸಿದರು.
ಆರಂಭದಲ್ಲಿ ಗಣ್ಯರು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಗೌರವ ಸಮರ್ಪಿಸಿದರು.
ಪ್ರಮಾಣಪತ್ರ ವಿತರಣೆ: ಈ ಸಂದರ್ಭದಲ್ಲಿ ‘ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ’ನ ನೂತನ 3೦ ಆಜೀವ ಸದಸ್ಯರುಗಳಿಗೆ ಸದಸ್ಯತ್ವ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಐ.ಇ.ಐ ಸಂಸ್ಥೆಯ ಆಜೀವ ಸದಸ್ಯರು , ಪಿಡಿಐಟಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*****