ಅನುದಿನ ಕವನ-೨೫೭, ಕವಿ: ಜ್ಯೋತಿ ಪ್ರಿಯ, ಬಳ್ಳಾರಿ, ಕವನದ ಶೀರ್ಷಿಕೆ:ಇಂಜಿನೀಯರಗಳ ದಿವಸ

ಇಂಜಿನೀಯರಗಳ ದಿವಸ

ಗತಿಶೀಲಚಕ್ರದಲಿ ಗಾರುಡಿಗನ್ಯಾರೋ
ಸೂತ್ರಧಾರಿಯು ಯಾರೋ!
ಅನುದಿನದ ಚಲನೆಯಲಿ
ಕಾಣುವವನೀತ ತಂತ್ರಜ್ಞಾನ ಪರಿಣಿತ,
ಬೆಟ್ಟದೆತ್ತರಕೆ ,ಕಟ್ಟಿರುವ ಮೆಟ್ಟಿಲನು,
ಬೆಟ್ಟದಿಂದ ಬೆಟ್ಟಕೂ ಸಂಪರ್ಕ
ಕಲ್ಪಿಸಿದ ಸಾಧಕನು,
ಕಡಲ ಅಲೆಗಳನು ಎದುರಿಸಿ ತೇಲುತ,
ಕಡಲಾಳದಲೂ ಚಲಿಸುತ,
ಕಡಲಲಿ ಮಹಲುಗಳ ನಿರ್ಮಿಸಿದ
ಮಹಾಮೇಧಾವಿ,
ಹಾರುಹಕ್ಕಿಯ ರೀತಿಯಲಿ
ಆಗಸದಲಿ ಭೂಮಂಡಲವನೇ
ಸುತ್ತಲು,ಪ್ಲೈನ್ ಜೆಟ್ಗಳ ನಿರ್ಮಾಪಕ,
ಬಾಹ್ಯಾಕಾಶದ ಚಂದಿರ ಮಂಗಳನನೂ
ಬಿಡದ ಜಟ್ಟಿ,
ದೂರದಲಿದ್ದರೇನಂತೆ ತಂತಿಯಲಿ
ಸಂದೇಶವಿತ್ತವರು,ಇಂದು,
ತಂತಿಗಳಿರದೆ ಸಂಪರ್ಕ ಸಾಧಿಸಿ
ಕತ್ತಲು ಮನೆಗಳಿಗೆ ದೀಪಬೆಳಗಲು
ಹರಿವ ನೀರ ತಡೆಯುತ,
ರವಿಯಕಿರಣಗಳನು ಹಿಡಿದಿಟ್ಟವನು,
ಬೆಳಕಿನೊಡನೆ ಶಕ್ತಿ ಉತ್ಪಾದಕರು,
ಉಳುವ ರೈತನ ಸ್ನೇಹಪರ,
ಹಲವು ಯಂತ್ರಗಳ ಅನ್ವೇಷಕ,
ವೈದ್ಯಕ್ಷೇತ್ರದಲೂ ಹಿರಿಮೆ ಮೆರೆಯುತ,
ವಿಜ್ಞಾನ ಯುಗದ ಚಲನಶೀಲ ಮನದ
ಪ್ರಗತಿ ಚಿಂತಕ,
ವಿದ್ವತ್ತಿನಿಂದ ಹೊಸದನ್ನ ಇತ್ತುದ
ವಿಧ್ವಂಸಕ ಕೃತ್ಯಕೆ ಬಳಕೆಯಾಗದೆ
ಮನುಕುಲದ ಪ್ರಗತಿಗೆ ಆದ್ಯತೆಯಾಗಲಿಯೆಂದೇ
ವಿನಮ್ರತೆಯ ಮನವಿ,
ಇವನಿರದ ಕಾಲವನು ಊಹಿಸಲಾಗದ
ದಿನಗಳಲಿ ಇವನ ನೆನೆಯದೆ ಬದುಕು ಸಾಗಿಹುದು,
ಇವನೇ ಗತಿಶೀಲಜಗದ ನವಯುಗದ
ನವನವೀನ ವಿಸ್ಮಯ ಆವೀಷ್ಕಾರಗಳ ಜನಕ,ಭವಿಷತ್ ಚಿಂತಕ,
ನಿತ್ಯಬದುಕಿನಲಿ
ಹಾಸುಹೊಕ್ಕಿರುವ ತಂತ್ರಜ್ಞಾನದ
ವಿಸ್ತರಣೆಯ ಕರ್ತೃುವಿನ ದಿನವಿದುವು,
ಸಂದ ಗೌರವ ಗರಿಮೆಗಳು
ಹಿರಿದಾಗಲೆಂಬ ಬಯಕೆಯಲಿ
ನಮಿಸುವೆನು.
ಪ್ರೀತಿಯಿಂದ ಇಂಜಿನೀಯರ್ ಕಲಿಗಳನು.

-ಜ್ಯೋತಿಪ್ರಿಯ


(ಡಾ.ಅರವಿಂದ ಪಾಟೀಲ್)
ಬಳ್ಳಾರಿ
*****