ಬಳ್ಳಾರಿ,ಸೆ.17: ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಅನುಕೂಲವಾಗುವ 371(ಜೆ) ಪ್ರಮಾಣ ಪತ್ರಗಳನ್ನು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಟ್ಟು 1,41,877 ಅಭ್ಯರ್ಥಿಗಳಿಗೆ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
ಬಳ್ಳಾರಿ ಜಿಲ್ಲಾಡಳಿತ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಅವರು ಧ್ವಜಾರೋಹಣ ಸಂದೇಶ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 6 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ. 80 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ಇತರ ಜಿಲ್ಲೆಗಳಲ್ಲಿ ಈ ಭಾಗದ ಜನರಿಗಾಗಿ ಶೇ. 8 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಶಿಕ್ಷಣದಲ್ಲಿ ಹಾಗೂ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿಯನ್ನು ಪಡೆಯಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ 371 (ಜೆ) ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿಕಾಯ್ದೆ 371(ಜೆ) ಜಾರಿಗೆ ತರಲಾಗಿದೆ ಎಂದರು.
.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.342.87 ಕೋಟಿ ಅನುದಾನ ಹಂಚಿಕೆಯಾಗಿದ್ದು, ಒಟ್ಟು 914 ಕಾಮಗಾರಿಗಳನ್ನು ಕೈಗೆತ್ತಿಕೊಂಡು 44 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ರೂ.160.79 ಕೋಟಿ ಅನುದಾನ ಹೆಚ್ಚ ಮಾಡಲಾಗಿದೆ. ಬಾಕಿ ಉಳಿದ 468 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಕೋವಿಡ್-19 ಸೋಂಕು ಹರಡುವಿಕೆಯನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದನ್ನು ಪ್ರಸ್ತಾಪಿಸಿದ ಡಿಸಿ ಮಾಲಪಾಟಿ ಅವರು ಜಿಲ್ಲೆಯ ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಜಿಲ್ಲಾದ್ಯಾಂತ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.
ಬಳ್ಳಾರಿ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯೋಜನೆಯೊಂದಿಗೆ ಈಗಾಗಲೇ 3 ಕೋವಿಡ್ ಡಿ.ಸಿ.ಹೆಚ್. 11 ಡಿ.ಸಿ.ಹೆಚ್.ಸಿ 09 ಖಾಸಗಿ ಡಿ.ಸಿ.ಹೆಚ್.367 ಸಾಮಾನ್ಯ ಬೆಡ್‍ಗಳು, 1838 ಆಕ್ಸಿನೇಟೆಡ್ ಬೆಡ್‍ಗಳು, 91 ಐ.ಸಿ.ಯು ವೆಂಟಿಲೇಟರ್ ರಹಿತ ಬೆಡ್‍ಗಳು ಹಾಗೂ 275 ಐ.ಸಿ.ಯು ವೆಂಟಿಲೇಟರ್ ಬೆಡ್‍ಗಳು ಹೀಗೆ ಒಟ್ಟು 2526 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಆರೋಗ್ಯ ನಂದನ ಯೋಜನೆ: ಕೋವಿಡ್ 3ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಕ್ಕಳ ಆರೈಕೆಯ ಮಹತ್ವಾಕಾಂಕ್ಷಿ ಆರೋಗ್ಯ ನಂದನ ಮಕ್ಕಳ ತಪಾಸಣಾ ಮತ್ತು ಚಿಕಿತ್ಸಾ ಅಭಿಯಾನದಡಿಯಲ್ಲಿ 0-18 ವರ್ಷದವರೆಗಿನ 3,71,505 ಮಕ್ಕಳಲ್ಲಿ ಈಗಾಗಲೆ 35,452 ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಹಾಲಿ ಇರುವ 39 ಅಂಬ್ಯುಲೇನ್ಸ್‍ಗಳೊಂದಿಗೆ ಹೊಸದಾಗಿ 05 ಅಂಬ್ಯುಲೇನ್ಸ್‍ಗಳನ್ನು ಕಲ್ಯಾಣ ಕರ್ನಾಟಕ ಅನುದಾನದ ಅಡಿಯಲ್ಲಿ ಖರೀದಿಸಲಾಗಿದೆ. 3 ನೇ ಹಂತದಲ್ಲಿ ಮಕ್ಕಳ ಆರೋಗ್ಯದ ಮೇಲೆ ಕೋವಿಡ್ ಪರಿಣಾಮ ಬೀರುವ ಸಾಧ್ಯತೆ ಹಿನ್ನಲೆಯಲ್ಲಿ ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶುಶೂಷಕರಿಗೆ ಮತ್ತು ಟೆಕ್ನಿಷಿಯನ್ ಅವರಿಗೆ ಬಳ್ಳಾರಿಯ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ಸಹಯೋಗದೊಂದಿಗೆ ತುರ್ತು ನಿಗಾ ಘಟಕ ಮತ್ತು ಮಕ್ಕಳ ಆರೈಕೆ ವಿಭಾಗದಲ್ಲಿ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕೋವಿಡ್ ಮೂರನೇ ಅಲೆಯು ಹರಡುವ ಮುನ್ನಚ್ಚರಿಕೆಯನ್ನು ತಜ್ಞರು ನೀಡಿರುವುದರಿಂದ ಹಿಂದಿನಂತೆಯೇ ಜಿಲ್ಲಾಡಳಿತಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ. 3 ನೇ ಅಲೆಯು ಸೃಷ್ಟಿ ಮಾಡಬಹುದಾದ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಲು ತಾವೆಲ್ಲರೂ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುತ್ತಾ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕರಿಸಲು ಕೋರಿದರು.
ವಿಶ್ರಾಂತ ಉಪನ್ಯಾಸಕ ಎನ್.ಬಸವರಾಜ ಅವರು ಕಲ್ಯಾಣ ಕರ್ನಾಟಕ ಹೋರಾಟದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ಸಮಯದಲ್ಲಿ ಆರೋಗ್ಯ ಅಮೃತ ಅಭಿಯಾನದಡಿಯಲ್ಲಿ ಹಲಕುಂದಿ, ಬೆಳಗಲ್ಲು, ಕೊಳಗಲ್ಲು, ಸಂಗನಕಲ್ಲು ಗ್ರಾಪಂ ಅಧ್ಯಕ್ಷರಿಗೆ ಆರೋಗ್ಯ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಪಾಲನ್ನ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಡಾ.ಆಕಾಶ್ ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ.ರಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
*****