ಗಜ಼ಲ್
ಸ್ವರ್ಗಸ್ಥರಾದವರು ಸ್ವರ್ಗದ ಬಗ್ಗೆ ಎಲ್ಲಿಯೂ ಹೇಳಲಿಲ್ಲ ಯಾಕಂದರೆ ಸ್ವರ್ಗ ಇರೋದು ಅವ್ವನ ಪಾದದ ಕೆಳಗಂತ ಗೊತ್ತಾತು||
ಜನನೀ ಜನ್ಮಭೂಮಿ ಜನ್ನತ ಆಗಿರುವಾಗ ಮನಸ್ಸಿನೊಳಗೆ ಮಾಡಿಕೊಂಡ ಮನ್ನತಗಳೆಲ್ಲ ಈಡೇರತಾವಂತ ಗೊತ್ತಾತು||
ಮೆತ್ತನೆ ಹಾಸಿಗೆ ಮೇಲೆ ಎಷ್ಟ್ಹೊತ್ತು ಹೊರಳಾಡಿದರೂ ಇತ್ತಿತ್ತಲಾಗ ಕಣ್ರೆಪ್ಪೆಗಳು ಕೂಡುತ್ತಿಲ್ಲ|
ಅಂದು ಅವ್ವನ ತೊಡೆ ಮೇಲೆ ತಲೆಯಿಟ್ಟು ಜೊಲ್ಲು ಸುರಿಸುತ್ತ ಮಾಡಿದ ನಿದ್ದೆ ಸ್ವರ್ಗಕ್ಕೂ ಮಿಗಿಲಂತ ಗೊತ್ತಾತು||
ಬೇನೆ ಬೇಸರಿಕೆ ಬಂದಾಗ ಎಷ್ಟು ಔಷಧಿ ತಿಂದರೂ ಇತ್ತಿತ್ತಲಾಗ ಜಲ್ದಿ ಆರಾಮ ಆಗೋದಿಲ್ಲ|
ಊರ ದೇವರಿಗೆ ಹರಕೆ ಹೊರುವ ಅವ್ವನ ದುವಾದ ಮುಂದೆ ದವಾದ ಆಟ ನಡೆಯೋದಿಲ್ಲಂತ ಗೊತ್ತಾತು||
ಅಕ್ಕ ತಂಗಿ ಅತ್ತೆ ಸೊಸೆ ಎಲ್ಲರೂ ಅವ್ವನ ಅವತಾರವೆ ಆದರೂ ಅವರ ಮನಸ್ಸು ಒಂದಾಗೋದಿಲ್ಲ|
ಎಲ್ಲರನ್ನೂ ಅಪ್ಪಿಕೊಳ್ಳುವ ಮಮತಾಮಯಿ ಮಾತೆ ಮನೆಯೊಳಗಿದ್ದರೆ ಅವಳಂಥ ಬಂಧು ಮತ್ತೊಬ್ಬರಿಲ್ಲಂತ ಗೊತ್ತಾತು||
ನಿಜ ಬದುಕಿನಲ್ಲಿ ‘ಗಟ್ಟಿಸುತ’ನ ಮುಂದೆ ಲೋಕದ ದೇವರುಗಳೆಲ್ಲಾ ತಾಳೆಯಾಗಲಿಲ್ಲ|
ಪುಣ್ಯ ಪಡೆಯೋಕೆ ಎಲ್ಲೂ ಹೋಗಬೇಕಿಲ್ಲ ಕಾಶಿ ಕಾಬಾಗಳೆಲ್ಲ ಸಾಕಿ ಸಲುಹಿದ ಅವ್ವ ಅನ್ನುವ ಮೂರ್ತಿಯೊಳಗೆ ಇವೆಯಂತ ಗೊತ್ತಾತು||
-ಬಾವಾಖಾನ ಎಂ.ಡಿ. ಸುತಗಟ್ಟಿ.
ಅಧ್ಯಾಪಕರು, ಮಲ್ಲಮ್ಮನ ಬೆಳವಡಿ, ಬೆಳಗಾವಿ ಜಿಲ್ಲೆ.
*****
(ಪದಗಳ ಅರ್ಥ)
ಜನ್ನತ್ -ಸ್ವರ್ಗ
ಮನ್ನತ್-ಹರಕೆ
ದವಾ-ಔಷಧಿ
ದುವಾ-ಪ್ರಾರ್ಥನೆ
ಜಲ್ದಿ-ಬೇಗ
ಕಾಬಾ-ಮುಸ್ಲೀಮರ ಪವಿತ್ರ ಕ್ಷೇತ್ರ
*****