ಹಂಪಿಯಲ್ಲಿ ಅ. 17, 18 ಮತ್ತು 19 ರಂದು ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆ -ಸಚಿವ ಆನಂದ್ ಸಿಂಗ್

ಬೆಂಗಳೂರು, ಸೆ.21: ವಿಕಾಸಸೌಧದಲ್ಲಿ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಚಿವ ಆನಂದ್ ಸಿಂಗ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಹಂಪಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಿದರು.
ಭಾರತೀಯ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆ ಗಡಿ ಗುರುತಿಸಿ ನಾಮಫಲಕ ಹಾಕುವುದಕ್ಕೆ ಸಚಿವರು ಸೂಚನೆ ನೀಡಿದ್ದಾರೆ.
ಹಂಪಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಅವಕಾಶ ನೀಡುವ ಕುರಿತು ನಿಯಮಗಳನ್ನು ಸರಳೀಕರಣ ಮಾಡಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು ಈ ಸಂಬಂಧ ಚಲನಚಿತ್ರ ನಿರ್ದೇಶಕರನ್ನು ಸೇರಿಸಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಹಂಪಿಯ 5 ಕಡೆ ಶೌಚಾಲಯವನ್ನು ಉನ್ನತಿಕರಣ ಮಾಡಲು ಸಚಿವ ಆನಂದ್ ಸಿಂಗ್ ಅವರು ಸೂಚಿಸಿದ್ದಾರೆ.
ಹಂಪಿ ನೋಡಲು ಬಂದ ಪ್ರವಾಸಿಗರಿಗೆ ಆನ್ ಲೈನ್ ಟಿಕೆಟ್ ಜೊತೆಗೆ ಮ್ಯಾನ್ಯುಯಲ್ ಟಿಕೆಟ್ ಸಹ ದೊರೆಯಬೇಕು ಹಾಗೂ ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲು ನಿರ್ಧರಿಸಲಾಗಿದ್ದು, 3 ಟವರ್ ಸ್ಥಾಪನೆ ಅನುಮತಿ ನೀಡಲಾಗಿದೆ.
ದಕ್ಷಿಣ ಭಾರತದ ಎಲ್ಲಾ ರಾಜ್ಯದ ಪ್ರವಾಸೋದ್ಯಮ ಸಚಿವರ ಸಭೆಯನ್ನು ಅ. 17,18 ಮತ್ತು 19 ರಂದು ಹಂಪಿಯಲ್ಲಿ ಏರ್ಪಡಿಸಲಾಗಿದ್ದು, ಸಭೆಯ ಹಿನ್ನಲೆಯಲ್ಲಿ ಅಗತ್ಯ ವ್ಯವಸ್ಥೆ ಕುರಿತು ಮಾಹಿತಿ ಪಡೆದ ಸಚಿವರು ಉತ್ತಮ ವ್ಯವಸ್ಥೆ ಮಾಡುವುದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು.
ಕಮಲಪುರದಲ್ಲಿ G+ 1 ಮನೆ ನಿರ್ಮಾಣಕ್ಕೆ ಅನುಮತಿ ಇದೆ. ಅದನ್ನು G+2 ಮಾಡಲು ನಿಯಮದಲ್ಲಿ ಸೂಕ್ತ ತಿದ್ದುಪಡಿ ಮಾಡಲು ಹಂಪಿ ವಿಶ್ವ ಪರಂಪರ ಪ್ರದೇಶ ಅಭಿವೃದ್ದಿ ಪ್ರಾಧಿಕಾರಕ್ಕೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿಗ ಪಂಕಜ್ ಕುಮಾರ್ ಪಾಂಡೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಶ್ರೀಮತಿ ಸಿಂಧೂ ಬಿ ರೂಪೇಶ್, ಕೆ ಎಸ್ ಟಿ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮ ಮತ್ತು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
*****