ಅನುದಿನ ಕವನ-೨೬೪, ಹಿರಿಯ ಕವಿ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಚಪ್ಪಲಿ ಮತ್ತು ನಾನು…..

 

ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದಲ್ಲಿ. ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ಉನ್ನತ ಆಡಳಿತಾಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಪ್ರಗತಿಪರ ಚಿಂತಕ, ಲೇಖಕ, ಉಪನ್ಯಾಸಕರಾಗಿ ಕಳೆದ ನಾಲ್ಕೂವರೆ ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ಗಮನಸೆಳೆದಿದ್ದಾರೆ. ವಿಶೇಷವಾಗಿ ಕಾವ್ಯಲೋಕಕ್ಕೆ ಡಾ. ಮೂಡ್ನಾಕೂಡು ಅವರು ನೀಡಿರುವ ಕೊಡುಗೆ ಅನನ್ಯ. ಚಿನ್ನಸ್ವಾಮಿಯವರು ಪ್ರಕಟಿಸಿದ ಸಂಕಲನಗಳು ಜನಪ್ರಿಯಗೊಂಡಿವೆ.. ವೆನಿಜುಲಾ ದೇಶದ ಸ್ಪ್ಯಾನಿಷ್ ಭಾಷೆಗೂ ಇವರ ಕವನಗಳು ಅನುವಾದಗೊಂಡಿರುವುದು ಗಮನಾರ್ಹ. ಹಿಂದಿಯಲ್ಲಿ ಅಂಗಾರ್ ಕೀ ಚೋಟಿಪರ್ (ಅನು: ಧರಣೀಂದ್ರ ಕುರಕುರಿ) ಎಂಬ ಸಂಕಲನ ಪ್ರಕಟವಾಗಿದೆ. ಇವರ ಕಾವ್ಯ ಕೃತಿಗಳಿಗೆ ನಾಡಿನ ವಿವಿಧ ಪುರಸ್ಕಾರ, ಬಹುಮಾನಗಳು ಲಭಿಸಿವೆ. ಡಾ. ಮೂಡ್ನಾಕೂಡು ಮತ್ತು ಬಳ್ಳಾರಿಗೂ ಸಾಹಿತ್ಯದ ನಂಟಿದೆ. ಹಲವು ಬಾರಿ ವಿಶೇಷ ಉಪನ್ಯಾಸ ನೀಡಲು ಬಳ್ಳಾರಿಗೆ ಆಗಮಿಸಿದ್ದಾರೆ. ವಿಶೇಷವೆಂದರೆ ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ತನ್ನ 25 ನೇ ಕೃತಿಯಾಗಿ ಹಿರಿಯ ಸಾಹಿತಿ ಡಾ. ಚಿನ್ನಸ್ವಾಮಿ ಅವರ ಚೆನ್ನುಡಿ (ಲೇಖನಗಳ ಸಂಗ್ರಹ) ಕೃತಿಯನ್ನು ಪ್ರಕಟಿಸುವ ಮೂಲಕ ಹೆಮ್ಮೆ ಪಟ್ಟಿದೆ.


ಇಂದು(ಸೆ.22) ತಮ್ಮ 67 ನೇ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುತ್ತಿರುವ ನಾಡಿನ ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಅವರ ಪ್ರಸಿದ್ಧ “ಚಪ್ಪಲಿ ಮತ್ತು ನಾನು” ಕವಿತೆಯನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಅನುದಿನ ಕವನ ಕಾಲಂ ನಲ್ಲಿ ಪ್ರಕಟಿಸುವ ಮೂಲಕ ಜನುಮ ದಿನದ ಶುಭಾಶಯಗಳನ್ನು ಕೋರುತ್ತಿದೆ.
(ಸಂಪಾದಕರು)

ಚಪ್ಪಲಿ ಮತ್ತು ನಾನು….

ನಾನು ದೇವಸ್ಥಾನಕ್ಕೆ ಹೋದಾಗ
ಚಪ್ಪಲಿಯನ್ನು ಹೊರಗೆ ಬಿಡುವುದಿಲ್ಲ
ನಾನೇ ಹೊರಗಿರುತ್ತೇನೆ

ಚಮ್ಮಾರನ ಕಾಲುಗಳಲ್ಲಿ ಕಂಡ ಚಪ್ಪಲಿ
ಮನುಷ್ಯ ನಾಯಿಯನ್ನು ಕಚ್ಚಿದಾಗ ಆಗುವಂತೆ
ಸುದ್ದಿಯಾಗುತ್ತದೆ

ಚಪ್ಪಲಿಗಳನ್ನು ಬಿಚ್ಚಿ ಹರಡುವ
ಎಲ್ಲರ ಕಾಲುಗಳು
ನನ್ನ ಮೇಲೆ ಹರಿದಾಡುತ್ತವೆ

ನಾನೊಂದು ಗಿಡ
ಅದು ನನ್ನ ಬುಡ
ಎಂದವರಿಗೆ ತಿಳಿಯುವುದೇ ಇಲ್ಲ

ಬತ್ತಿದ ಕೆರೆಯ ನೀರುಗುಣಿಗೆ
ಗೋಣ ಅನಿಸುವ ಕೊಕ್ಕರೆಯಂತೆ
ನಾನು ಮುಂಗಾಲ
ತುದಿ ಬೆರಳುಗಳ ಮೇಲೆ
ನಿಂತು ಇಣುಕಿ ದೇವರ ರೂಪವನ್ನು
ಕಂಡಷ್ಟು ಕದಿಯಿತ್ತೇನೆ

ಹತ್ತಾರು ತಲೆಗಳ ನಡುವೆ
ಹೊಳೆಯುವ ಮುಕುಟಮಣಿ
ಮೆತ್ತನೆಯ ಹಾಸಾಗಿ ಬೆಳೆದು
ಛತ್ರಿಯಾಗುವ ಫಣಿ
ಒಮ್ಮೆ ವಜ್ರಖಚಿತ ಕಿರೀಟ
ಕಂಠೀಹಾರ, ಜನಿವಾರ
ದೀಪದಾರತಿ ಬೆಳಗಿ
ಫಂಟನಾದ ಮೊಳಗುವಾಗ
ಕಾದ ಕಬ್ಬಿಣವಾಗಿ
ನೆಲ ಕುಸಿಯತೊಡ, ಹಸಿ
ಒಡಲು ಉರಿ ಹತ್ತಿ ಬೇಯುತ್ತದೆ

ದೂರವಿದ್ದರೂ ನಿಷ್ಠಾವಂತ
ಗರುಡಗಂಭ ನನಗಿಷ್ಟ, ಅದರ ಮುಂದಿಟ್ಟ
ಕೆಂಡದ ಕುಂಡಕ್ಕಷ್ಟು ಧೂಪ ಎರಚಿ
ಹೊಗೆ ಚಿಮ್ಮಿಸುವಾಗ ನಾನು ಕೃತಾರ್ಥ

ದೇವರ ಬಳಿ ಸುಳಿದು
ದಕ್ಷಿಣೆ ಪ್ರದಕ್ಷಿಣೆ ಹಾಕುವವರು
ರೆಪ್ಪೆ ಮುಚ್ಚದೆ ಆಗಾಗ ನನ್ನತ್ತ ನೋಡುವರು
ನನ್ನ ಚಿತ್ತ ಮಾತ್ರ ದೇವರತ್ತ

ಗರ್ಭಗುಡಿಯಲ್ಲಿ
ಹೂವು ಗಂಧ ಪಡೆದುಕೊಳ್ಳುವವರ ಆತ್ಮ
ಕಳಚಿಟ್ಟ ಚಪ್ಪಲಿಗಳ ಬಳಿ
ಹೊರಗೆ

ನಿತ್ಯ ಹಜಾರದಲಿ ನಿಂತು
ಗೋಣ ಆನಿಸಿ ಇಣುಕಿ
ಪುನೀತವಾಗುವ ನನ್ನ ಆತ್ಮ
ದೇವರ ಬಳಿ ಒಳಗೆ

-ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಕವಿಗಳು, ಬೆಂಗಳೂರು