ಬಳ್ಳಾರಿ, ಸೆ. 23: ಕರ್ನಾಟಕದ ಸಂಸ್ಕೃತಿ ಶ್ರೀಮಂತಗೊಳ್ಳಲು ಜೈನ ಧರ್ಮದ ಕೊಡುಗೆ ಅಪಾರ ಎಂದು ಡಾ. ಚಿಕ್ಯಾಟೆ ಮಠದ ವೀರಭದ್ರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಭಗವಾನ್ ಪಾಶ್ವನಾಥ ತೀರ್ಥಂಕರರ ಜಿನಮಂದಿರದಲ್ಲಿ ನಡೆದ `ಬಳ್ಳಾರಿ ಜಿಲ್ಲೆಯ ಜೈನ ನೆಲೆಗಳು’ ಪುಸ್ತಕ ಲೋಕಾರ್ಪಣೆಯಲ್ಲಿ ಗ್ರಂಥಕತೃಗಳಾಗಿ ಅವರು ಮಾತನಾಡಿದರು.
ಅಖಂಡ ಬಳ್ಳಾರಿ ಜಿಲ್ಲೆಯಾದ್ಯಂತ ವ್ಯಾಪಿಸಿರುವ ಜೈನ ಬಸದಿಗಳು, ತೀರ್ಥಂಕರರ ನೆಲೆಗಳು ಜೈನ ಧರ್ಮದ ವಿಸ್ತಾರವನ್ನು ವಿವರಿಸುತ್ತವೆ. ಜೈನ ಧರ್ಮ, ಜೈನ ಬಸದಿ ಮತ್ತು ಆಚಾರ – ಸಂಪ್ರದಾಯಗಳ ಕುರಿತಾದ ಅನೇಕ ಶಾಸನಗಳು ಜಿಲ್ಲೆಯಲ್ಲಿ ನೆಲೆಯೂರಿರುವ ಜೈನ ಸಂಸ್ಕೃತಿಯನ್ನು ಸ್ಪಷ್ಟಪಡಿಸುತ್ತಿವೆ ಎಂದರು.
ಅನೇಕ ಶಾಸನಗಳು, ಬಸದಿಗಳು ನಶಿಸುತ್ತಿದ್ದು, ಅವುಗಳನ್ನು ಭವಿಷ್ಯಕ್ಕಾಗಿ ಸಂರಕ್ಷಿಸಬೇಕಾದ ಅನಿವಾರ್ಯತೆ ಇದೆ. ಸಿರುಗುಪ್ಪ ತಾಲೂಕಿನ ಬಲಕುಂದೆಯಿಂದ ಪ್ರಾರಂಭವಾದ ಜೈನ ನೆಲೆಗಳ ಅಧ್ಯಯನ, ಕೋಗಳಿ ಗ್ರಾಮದಲ್ಲಿರುವ ವಿಶೇಷಗಳನ್ನು – ಕುತೂಹಲಗಳನ್ನು ಅರಿಯುವಲ್ಲಿನ ನಡೆಗಳನ್ನು – ಅನುಭವಗಳನ್ನು ಅವರು ಮೆಲಕುಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರು ಅವರು ಮಾತನಾಡಿ, ಡಾ. ಚಿಕ್ಯಾಟೆ ವೀರಭದ್ರಯ್ಯ ಅವರು, ಜೈನೇತರರಾಗಿಯೂ ಅತ್ಯುತ್ತಮ ಸಂಶೋಧನೆ, ಅಧ್ಯಯನ ನಡೆಸಿದ್ದಾರೆ. `ಬಳ್ಳಾರಿ ಜಿಲ್ಲೆಯ ಜೈನ ನೆಲೆಗಳು’ ಉತ್ತಮ ಗ್ರಂಥವಾಗಿದೆ ಎಂದರು.
ಬಳ್ಳಾರಿ ಜಿಲ್ಲಾ ಶ್ವೇತಾಂಬರ ಜೈನ್ ಸಮಿತಿ ಅಧ್ಯಕ್ಷ ಸಾಕಲಚಂದ್ ಬಾಗ್ರೆಚಾ ಅವರು ಗ್ರಂಥದ ಕುರಿತು ಮಾತನಾಡಿದರು. ಹಿರಿಯ ಸಾಹಿತಿ ಟಿ.ಕೆ ಗಂಗಾಧರ ಪತ್ತಾರ್ ಅವರು ಕೃತಿಕಾರರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಕೃತಿ ಲೇಖಕ ಡಾ. ಚಿಕ್ಯಾಟೆ ಮಠದ ವೀರಭದ್ರಯ್ಯ ದಂಪತಿಗಳನ್ನು, ದಿಗಂಬರ ಜೈನ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜೈನ ದಿಗಂಬರ ಮಂದಿರದ ಅಧ್ಯಕ್ಷ ಪಿ.ಬಿ. ನಡುವಿನ ಮನಿ, ಮುಖಂಡ ವೃಷಭರಾಜ್ ,ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಮತ್ತಿತರರು ಉಪಸ್ಥಿತರಿದ್ದರು.
ಡಾ. ಕುಮಾರ್ ಅವರು ಸ್ವಾಗತಿಸಿದರು. ಡಾ. ವೀರೇಂದ್ರ ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಮತ್ತು ಶ್ವೇತ ಅವರು ಪ್ರಾರ್ಥಿಸಿದರು. ರಾಜಕುಮಾರ್ ಗೋಗಿ ವಂದಿಸಿದರು.
*****