ಚಂದಿರನೊಂದಿಗೆ ಕೊಳದ ಮಾತು
ನಗೆಯ ಸೊಗಕೆ ಸೋತ ಚಂದಿರನೇ ಗರ್ಭದಾಳಕಿಳಿದಿಳಿದು,
ಬೆಳ್ಳಿ ಬೆಳಕಿನ ಬಳ್ಳಿ ಬಳುಕಿ ಬೇರಿಳಿದು
ಹೊಕ್ಕುಳಬಳ್ಳಿಯ ಕೊಳದೊಳಗಿಳಿಬಿಟ್ಟ.
ಛಂದದ ಹೂವಾಯಿತು ಕೊಳವೇ ತನ್ನ ಬಿಂಬವ
ಮೋಹಿಸುವಂತೆ, ಚಂದಿರನ ಮುಗುಳ್ನಗೆಯ
ಚೆಲ್ಲಿದವು ಬಿರಿದ ಕೆಂದಾವರೆ ಹರಳುಗಳು
ಸಣ್ಣ ಗಾಳಿಯಲೆಯ ಅಲುಗಿಗೆ ಹೊಳೆಯಿಸಿತು
ನೀರಬಿಂದುವ, ತಾಮರೆ ಪತ್ರದ ಹಸಿರುನಂಟು
ಕರಗಿಸದೆ ಕಾವಲು ತೆಕ್ಕೆಯಲಿ
ಸೆರಗೊಳಗೆ ಕದ ತೆರೆದು ಕಣ್ಣೆರಡು ಹೋಳಾಗಿ
ಹಿಡಿ ತುಂಬ ಕುಡಿಕೆ ಬಾಯ ತೆರೆದು
ಸಟಸಟನೆ ಉಕ್ಕಿದ ನೊರೆಹಾಲು ಕೊಳತುಂಬ
ಇಂತಿರಲು ಇದ್ದಕ್ಕಿದ್ದಲೇ ಕದ್ದು ಹೋಗಬಹುದೇ ಈಜಿಬಿದ್ದ ಚಂದಿರ? ಕೊಳದೆದೆಯ ತಬ್ಬಿದ ಬೆಳದಿಂಗಳ ಬಿಸಿಲ ಮಬ್ಬಲಿ ಬಿಟ್ಟು
ನಡುವಲ್ಲಿ ನಿಂತು ತಬ್ಬಿಬ್ಬಾಯಿತು! ಕೊಳದ ಸವೆದ ದಾರಿಯೂ ಮಬ್ಬು
ಇರುವ ದಾರಿಯಲಿ ಕತ್ತೆತ್ತಿ ನೋಡಿದರೂ ನೆರಳಿಲ್ಲ.
ತಾಮರೆ ಕರುಳ ಕತ್ತರಿಸಿ ಎತ್ತೊಯ್ಯಬಹುದೇ? ಹೀಗೆ…
ನೀರು ನೆರಳ ದಾಟಿಸಿ, ನೆಲಹೊಲವ ದಾಟಿಸಿ,
ಅಂತರ ಬೆಂತರದ ತೂಗು, ನಡುಹಗಲ ಬಿಸಿಲು ಸೆರಗು
ಹೆಣವನೆತ್ತೊಯ್ದ ಹಗಲುಗನಸು, ಬರಲು ಬಡಿದ ಬರಬಿಸಿಲು
ಏರು ದಾರಿಯಲಿ ಒಳಗಾಳಿ ಹೊರಸುಯ್ದು ಹರಿಯಲಾರದು
ಸುಗ್ಗಿಯಲಿ ಇಳಿಯಲಾರದು, ಕೊಂದುಕೊಳ್ಳಲಾರದು ನೀರ ಕೊರಲು!
ಜೀವ ಜಲದ ಹರಿವಲ್ಲೇ ನಗುವ ಮಗು ಚಂದಿರಗೂ ಸಾವುಂಟಲ್ಲ!
ಹೊಕ್ಕುಳ ಹೂವು ತಾಮರೆಗೂ ಸಾವುಂಟಲ್ಲ!
ಜೀವಜಲಕೆಲ್ಲಾದರೂ ನೋವುಂಟೇ?
ನೋವಿಗೆಂದಾದರೂ ಸಾವುಂಟೇ?
ನೋವಲ್ಲೇ ನುರಿವುದಲ್ಲ ಚಂದಿರನ ಹೆರಿಗೆ!
ಮಲ್ಲಿಗೆ ಮೊಗ್ಗು ಬಿರಿವ ಸದ್ದುಂಟು ಕಾಲಕ್ಕಾಲಕ್ಕೂ
ಮೇಕೆಮರಿಯ ತೆಬ್ಬಿ ಮುದ್ದಿಸಿ ಮ್ಯಾಗರೆವ ಆಡಿಗೂ ಮಾತುಂಟು
-ಹೆಚ್. ಆರ್. ಸುಜಾತಾ
ಬೆಂಗಳೂರು