ಮಗಳೆಂದರೆ ವಾತ್ಸಲ್ಯದ ಊಟೆ -ಸಿದ್ಧರಾಮ‌ ಕೂಡ್ಲಿಗಿ (ವಿಶ್ವ ಪುತ್ರಿಯರ ದಿನದ ಅಂಗವಾಗಿ ವಿಶೇಷ ಬರಹ)

ಮಗಳೆಂದರೆ ವಾತ್ಸಲ್ಯದ ಊಟೆ
-ಸಿದ್ಧರಾಮ‌ ಕೂಡ್ಲಿಗಿ

ನನ್ನ ದೃಷ್ಟಿಯಲ್ಲಿ ಪ್ರತಿಯೊಬ್ಬ ತಂದೆಗೂ ಇಂತಹ ಚಿತ್ರಗಳು ಅತ್ಯಪರೂಪದ ಚಿತ್ರಗಳು. ಬದುಕಿನಲ್ಲಿ ಇಂತಹ ಚಿತ್ರಗಳು ಅತ್ಯಂತ ವಿರಳ.


👆ಈ ಚಿತ್ರದಲ್ಲಿ ಮಗಳು ನನ್ನ ಜೊತೆಗಿದ್ದ ಅತ್ಯಂತ ಸಂತಸದ ಕ್ಷಣ. ನಾನೆಂದರೆ ಹಾಗೇ. ಅವಳಿಗೆ ಅಪ್ಪನೆಂದರೆ ಅದೊಂದು ಬೆಚ್ಚನೆಯ ಗೂಡು, ಹಕ್ಕಿಯಾಗಿ ಹಾರಲು ದೊರೆತ ಆಗಸ, ಮನದೊಳಗಿನದೆಲ್ಲವನ್ನೂ ಹೇಳಿಕೊಳ್ಳಲು ದೊರೆತ ಗೆಳೆಯ, ತನ್ನೆಲ್ಲ ಭಾವಗಳನ್ನು ಹೇಳಿಕೊಳ್ಳಲು ದೊರೆತ ಒಂದು ಚಂದದ ಭಾವ.

ಈ ಚಿತ್ರದಲ್ಲಿ👇

ಮಗಳ ಮದುವೆಯ ನಂತರ ಆಕೆಯನ್ನು ಅವಳ ಮನೆಯಲ್ಲಿ ಬಿಟ್ಟು ಬರುವ ಕ್ಷಣ. ಇಬ್ಬರ ಕಣ್ಣಲ್ಲೂ ನೀರು. ಎಷ್ಟೇ ತಡೆದುಕೊಂಡರೂ ಇಬ್ಬರಲ್ಲೂ ಧಾರಾಕಾರ ಕಣ್ಣೀರು. ನನ್ನ ಕಿರುಬೆರಳನ್ನು ಹಿಡಿದು ಆಡಿಕೊಂಡಿದ್ದ ಮಗುವನ್ನು ಬಿಟ್ಟು ಬರುವ ಕ್ಷಣ ಇದೆಯಲ್ಲ ಆಗಲೇ ಪ್ರತಿಯೊಬ್ಬ ತಂದೆಗೂ ಗೊತ್ತಾಗೋದು ಮಗಳೆಂದರೆ ಬರೀ ಮಗಳಲ್ಲ ಆಕೆ “ತಾಯಿ” ಅಂತ. ಅಷ್ಟೊಂದು ವಾತ್ಸಲ್ಯದ ಭಾವ.
ಹೀಗಾಗಿ ಈ ಎರಡು ಚಿತ್ರಗಳು ನನ್ನ ಬದುಕಿನಲ್ಲಿ ಅತ್ಯಂತ ಬೆಲೆ ಕಟ್ಟಲಾಗದ ಚಿತ್ರಗಳು.

ಮಗಳೆಂದರೆ ಬರೀ ಮಗಳಲ್ಲ, ತಂದೆಯ ಎದೆಯಲ್ಲೊಂದು ಹೆಂಗರುಳು ಮೂಡಿಸುವ ಒಂದು ಶಕ್ತಿ. ಮಗಳು ಹುಟ್ಟಿದಾಕ್ಷಣ ತಂದೆಯ ಎದೆಯಲ್ಲೊಬ್ಬಳು ತಾಯಿ ಸ್ಥಾಪಿತಗೊಂಡುಬಿಡುತ್ತಾಳೆ. ಹೀಗಾಗಿ ಮಗಳೆಂದರೆ ನನ್ನ ಎದೆಯಾಳದಲ್ಲಿ ಸದಾ ಒರತೆಯಾಗಿ ಚಿಮ್ಮುವ ವಾತ್ಸಲ್ಯದ ಊಟೆ.

-ಸಿದ್ಧರಾಮ ಕೂಡ್ಲಿಗಿ
*****