ಕವಿ ಪರಿಚಯ:
ಕೊಪ್ಪಳ ಜಿಲ್ಲೆಯ ಭೈರಾಪುರದ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರು ವೃತ್ತಿಯಲ್ಲಿ ಶಿಕ್ಷಕರು. ಸಾಹಿತ್ಯ ಚಟುವಟಿಕೆಯಲ್ಲಿ ಸದಾ ನಿರತರಾಗಿರುವ ಇವರು, ಅರಳು ಮಲ್ಲಿಗೆ ಚುಟುಕು ಸಂಕಲನ, ಜೀವದೊಡಲು ಕಾವ್ಯ ಸಂಕಲನ,
ಬದುಕಿಗೊಂದು ಮಾತು ಸೂಕ್ತಿಗಳು,
ಗಿಲಿಗಿಲಿ ಗಿಲಕಿ, ಮಕ್ಕಳ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಗಜಲ್, ಹಾಯ್ಕುಗಳು,ಭಾವಗೀತೆ, ಬಂಡಾಯ ಕವಿತೆಗಳನ್ನು ಪ್ರಕಟಿಸುವ ತಯಾರಿಯಲ್ಲಿದ್ದಾರೆ.
ಇವರ ಅನುಪಮ ಸಾಹಿತ್ಯ ಸೇವೆಗೆ ಹಲವು ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ರಾಜ್ಯ ಮಟ್ಟದ ಕವಿಗೋಷ್ಠಿ , ಚರ್ಚಾ ಗೋಷ್ಟಿಯಲ್ಲಿ ಭಾಗವಹಿಸಿರುವುದು ವಿಶೇಷ.
ಮುಂಡರಗಿ ಅನ್ನದಾನಿಶ್ವರರ ಭಕ್ತಿಗೀತೆ ಕ್ಯಾಸೆಟ್ ಕೂಡಾ ಬಿಡುಗಡೆಯಾಗಿ ಭಕ್ತರ ಗಮನ ಸೆಳೆದಿದೆ ಹಾಗು ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ‘ಆಸರೆ ಇಲ್ಲದ ಬಳ್ಳಿ’ ಭಾವಗೀತೆಯನ್ನು 58ಸಾವಿರ ಸಂಗೀತ ಪ್ರಿಯರು ಝೆಂಕಾರ ಯ್ಯೂಟೂಬ್ ನಲ್ಲಿ ವೀಕ್ಷಿಸಿರುವುದು ಗಮನಾರ್ಹ.
ಇಂದಿನ ಅನುದಿನ ಕವನದ ಗೌರವಕ್ಕೆ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ಗಜಲ್ ಪಾತ್ರವಾಗಿದೆ.👇
ಗಜಲ್
ಸದಾ ಜೊತೆಗಿರುತ್ತವೆ ನೆನಪುಗಳು ಬೆಂಬಿಡದ ನೆರಳಿನಂತೆ.
ನೆನಪಿರದ ದಿನ ಸ್ಮಶಾನದ ಗೋರಿಯಂತೆ!!
ಏನು ಹೇಳಲಿ ನಿನ್ನ ನೆನಪುಗಳ ಹಾವಳಿಗೆ.
ಮಧು ಬಟ್ಟಲಿನ ಕೊನೆ ಗುಟುಕಿಗೆ ಉಳಿದ ಹನಿಯಂತೆ!!
ಇರುಳ ನೆರಳಿಗೂ ಸೂರ್ಯನ ಸೂತಕದ ಛಾಯೆ.
ನಿದ್ರೆ ತಿಂದಿವೆ ನೆನಪುಗಳು ಮಾಯದ ಗಾಯದಂತೆ!!
ಆಟವಾಡಿವೆ ಸಂಬಂಧಗಳು ಕೃಷ್ಣ ಶಕುನಿಯರಂತೆ.
ಸೋಲು ಗೆಲುವು ಬೇಕಿಲ್ಲ ಪ್ರೀತಿ ಇರದ ಬೃಂದಾವನ ದಂತೆ!!
ಹೇಳಿಬಿಡು ವಿದಾಯ ಯಮಹನ ಪ್ರೀತಿಯ ಬಾನಿಗೆ.
ನಿನೊಂದು ಮರೆತು ಮರೆಯಾದ ನಕ್ಷತ್ರದಂತೆ!!
-ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ,
ಶಿಕ್ಷಕರು, ಭೈರಾಪುರ
*****