9 ಮಹಾನಗರ ಪಾಲಿಕೆ: ಸಫಾಯಿ ಕರ್ಮಚಾರಿ ಮಹಿಳೆಯರಿಗೆ ಬ್ಯಾಟರಿ ಚಾಲಿತ ವಾಹನ: ಅಧ್ಯಕ್ಷ ಹೆಚ್. ಹನುಮಂತಪ್ಪ

ಬಳ್ಳಾರಿ,ಸೆ.27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 9 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಿ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮಹಿಳೆಯರ ದಿನನಿತ್ಯದ ಓಡಾಟಕ್ಕಾಗಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ನೀಡಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ 1 ಲಕ್ಷದ ವೆಚ್ಚದಲ್ಲಿ ವಾಹನಗಳು ವಿತರಿಸಲಾಗುತ್ತಿದ್ದು, ಶೆ.90 ರಷ್ಟು ವೆಚ್ಚವನ್ನು ನಿಗಮವೇ ಭರಿಸಲಿದೆ;ಶೇ.10ರಷ್ಟು ಫಲಾನುಭವಿ ಪಾವತಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 200 ಮತ್ತು ರಾಜ್ಯದ ವಿವಿಧ ಮಹಾನಗರ ಪಾಲಿಕೆಗೆ 200 ವಾಹನ ಸೇರಿದಂತೆ ಮೊದಲ ಹಂತದಲ್ಲಿ ರಾಜ್ಯದ 400 ಜನ ಸಫಾಯಿ ಕರ್ಮಚಾರಿಗಳಿಗೆ ವಾಹನ ನೀಡಲಾಗುವುದು. ಈ ಯೋಜನೆಯಡಿ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇನ್ನು ಒಂದು ತಿಂಗಳಲ್ಲಿ ವಾಹನ ವಿತರಿಸಲಾಗುವುದು ಎಂದರು.
ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ನಿಗಮಕ್ಕೆ ಕೇಂದ್ರ ಸರಕಾರದಿಂದ 350 ಕೋಟಿ ಅನುದಾನ ನೀಡುವಂತೆ ಕೇಂದ್ರ ಸಚಿವ‌ ನಾರಾಯಣ ಸ್ವಾಮಿ ಹಾಗೂ ರಾಜ್ಯ ಸರಕಾರದಿಂದ 500 ಕೋಟಿ ರೂ. ನೆರವು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಲ್ಲಿ ಮನವಿ ಮಾಡಿದ್ದು, ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಮುಂದಿನ ದಿನಗಳಲ್ಲಿ ನಿಗಮಕ್ಕೆ ಬೇಕಾದ ಅಗತ್ಯ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
30 ಕೋಟಿ ಅನುದಾನ ಬಿಡುಗಡೆ: ಕಳೆದ ವರ್ಷ ಸರ್ಕಾರದಿಂದ ನಿಗಮಕ್ಕೆ 66 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ನೇರಸಾಲ, ಉದ್ಯಮಶೀಲತೆ, ಭೂ ಒಡೆತನ, ಸ್ವಯಂ ಉದ್ಯೋಗ, ಐರಾವತ ಯೋಜನೆ ಸೇರಿದಂತೆ ಹಲವು ಯೋಜನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸರಕಾರದಿಂದ 30 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಕರ್ಮಚಾರಿಗಳ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ ಎಂದರು.
ಸಫಾಯಿ ಕರ್ಮಚಾರಿ ಅವಲಂಬಿತ ಮಕ್ಕಳಿಗೆ ಉಚಿತ ಟ್ಯಾಬ್: 9, 10ನೇ ತರಗತಿ ಮತ್ತು ಪಿಯುಸಿಯಲ್ಲಿ ಓದುತ್ತಿರುವ ಸಫಾಯಿ ಕರ್ಮಚಾರಿಗಳ ಮಕ್ಕಳ ವಿದ್ಯಾಭ್ಯಾಸದ ನೆರವಿಗಾಗಿ ರೂ.10 ಸಾವಿರ ವೆಚ್ಚದಲ್ಲಿ ಉಚಿತ ಟ್ಯಾಬ್ ನೀಡಲಾಗುತ್ತದೆ. ಇದು ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ಇದರ ಜೊತೆಗೆ ಸಫಾಯಿ ಕರ್ಮಚಾರಿ ಸಮುದಾಯದ ನಿರುದ್ಯೊಗಿಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ಒಂದು ವರ್ಷದ ಅವಧಿಗೆ ಡಿಪ್ಲೋಮಾ ಕೋರ್ಸ್ ತರಬೇತಿ ನೀಡಲಾಗುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ ತರಬೇತಿಗಾಗಿ 26 ಜನರನ್ನು ಆಯ್ಕೆ ಮಾಡಲಾಗಿದ್ದು, ಒಬ್ಬರಿಗೆ 28 ಸಾವಿರದಂತೆ ಖರ್ಚು ಮಾಡಲಾಗುತ್ತದೆ. ಇದು ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸಫಾಯಿ ಕರ್ಮಚಾರಿಗಳ ಮರು ಸಮೀಕ್ಷೆ:* 2013 ರ ಸಮೀಕ್ಷೆ ಪ್ರಕಾರ ರಾಜ್ಯದಾದ್ಯಂತ ಅಧಿಕೃತವಾಗಿ 1.43 ಲಕ್ಷ ಸಫಾಯಿ ಕರ್ಮಚಾರಿಗಳು ಇದ್ದಾರೆ. ಖಾಸಗಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳು ವ್ಯಾಪ್ತಿಗೆ ಸೇರಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ಅಡಿಯಲ್ಲಿ ಶೀಘ್ರದಲ್ಲಿಯೇ ಮರು ಸಮೀಕ್ಷೆ ಸಮೀಕ್ಷೆ ನಡೆಸಲಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಅವಿಭಜಿತ ಬಳ್ಳಾರಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ನಮ್ಮ ಅಂದಾಜಿನ ಪ್ರಕಾರ ರಾಜ್ಯದಲ್ಲಿ 5 ಲಕ್ಷ ಸಫಾಯಿ ಕರ್ಮಚಾರಿಗಳು ಇದ್ದು, ಅವರ ಅವಲಂಬಿತರು ಸೇರಿ 25 ರಿಂದ 30 ಲಕ್ಷ ಜನಸಂಖ್ಯೆ ಆಗಬಹುದು. ಅವರನ್ನೆಲ್ಲಾ ಸಫಾಯಿ ಕರ್ಮಚಾರಿ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಅವರು ವಿವರಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಸಫಾಯಿ ಕರ್ಮಚಾರಿಗಳಿಗೆ ಶೇ.1ರಷ್ಟು ಸೆಸ್ ನೀಡುವಂತೆ ಚರ್ಚೆ ಮಾಡಲಾಗಿದೆ. ಈ ಕುರಿತು ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಸ್ಥಳೀಯ ಸಂಸ್ಥೆಗಳು ಸ್ಥಳ ನೀಡಲು ಒಪ್ಪಿದರೆ ಸಫಾಯಿ ಕರ್ಮಚಾರಿಗಳಿಗಾಗಿ ವಿಶ್ರಾಂತಿ ಕೊಠಡಿ ಹಾಗೂ ಸಾಮೂಹಿಕ ಶೌಚಾಲಯ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಫಾಯಿ ಕರ್ಮಚಾರಿ ನಿಗಮದ ಜಿಲ್ಲಾಧಿಕಾರಿ ಲಕ್ಷ್ಮಣ ಇದ್ದರು.
*****