ವ್ಯಕ್ತಿ ವಿಶೇಷ-೦೧ ಬಹುಮುಖ ಪ್ರತಿಭೆ ಪಿ ಬಿ ಕೋಟೂರು, ಪರಿಚಯ ಬರಹ: ಪ್ರೊ. ಎಸ್ ಎಂ ಶಶಿಧರ್, ಹೊಸಪೇಟೆ

ಇವರೊಬ್ಬ ಅಪರೂಪದ ವ್ಯಕ್ತಿ. ಲೇಖಕ, ಕವಿ, ಶಿಕ್ಷಣ ತಜ್ಞ, ಜಾಗತಿಕ ಪ್ರತಿಭಾ ಪರಿವರ್ತಕ, ವಾಗ್ಮಿ, ಪ್ರೇರಣಾ ಭಾಷಣಕಾರ, ಕಾರ್ಪೊರೇಟ್ ನಾಯಕ, ಜಾಗತಿಕ ಸೌಹಾರ್ದ ರಾಯಭಾರಿ….. ಹೀಗೆ ಹತ್ತು ಹಲವು ಬಗೆಗಳಲ್ಲಿ ವರ್ಣಿಸಿದರೂ, ಪರಿಪೂರ್ಣ ವಿವರಣೆಗೆ ನಿಲುಕದ ವ್ಯಕ್ತಿತ್ವ. ಕೋಟೂರ್ ಅವರು ಬಹುಮುಖ ಪ್ರತಿಭೆ. ಅವರ ಕಾಂಪ್ಯೂಟರ್ ಪ್ರೋಗ್ರಾಮಿಂಗ್ ಪಠ್ಯಪುಸ್ತಕ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದುದು. ಶಿಕ್ಷಣ ಹಾಗೂ ಉದ್ಯಮ ಎರಡೂ ಕ್ಷೇತ್ರಗಳಲ್ಲಿ ಸಮನ್ವಯ ಸಾಧಿಸಿ ಅನನ್ಯ ಸಾಧನೆ ಮಾಡಿದ ವಿರಳರಲ್ಲಿ ಇವರೂ ಒಬ್ಬರು. ಮಹಾವ್ಯಕ್ತಿಗಳು ಸದಾ ಉನ್ನತ ವಿಚಾರಗಳನ್ನೇ ಧೇನಿಸುತ್ತಾರೆ, ಚರ್ಚಿಸುತ್ತಾರೆ ಎಂಬ ಉಕ್ತಿಯಂತೆ ಅವರ ಮಾತು ಬರಹಗಳಲ್ಲಿ ಶ್ರೇಷ್ಟ ವಿಚಾರಗಳ, ಆದರ್ಶಗಳ ಹೂರಣವಿರುತ್ತದೆ. ನನಗಂತೂ ಅವರು ಬಹು ಅಚ್ಚುಮೆಚ್ಚಿನ ವ್ಯಕ್ತಿ. ಯಾವುದೇ ಸಮಸ್ಯೆಗೆ ಪರಿಹಾರ ಒದಗಿಸಬಲ್ಲ ಪರಿಣತಿ, ಕೌಶಲ್ಯಗಳನ್ನು ಅವರಲ್ಲಿ ನೋಡಿದ್ದೇನೆ. ವಿಪ್ರೋ ಕಂಪೆನಿಯ ಫ್ರೆಶರ್ಸ್ ಎಂಗೇಜ್ಮೆಂಟ್ ಪ್ರೋಗ್ರಾಮ್ ವಿಭಾಗದ ಜಾಗತಿಕ ಮುಖ್ಯಸ್ಥರಾಗಿ ಅವಿರತ ಕೆಲಸ ಕಾರ್ಯಗಳ ಮಧ್ಯೆಯೂ ಕಾವ್ಯ ಬರೆಯಬಲ್ಲ ಅವರು ನನ್ನಂಥವರಿಗೆ ಸ್ಫೂರ್ತಿಯಾಗಿದ್ದಾರೆ; ರೋಲ್ ಮಾಡೆಲ್ ಆಗಿದ್ದಾರೆ. ಕೋಟೂರ್ ಅವರು ಕನ್ನಡದಲ್ಲಿ ಕಾವ್ಯ ಕಟ್ಟುವ ಪರಿ ಸೋಜಿಗ ಮೂಡಿಸುತ್ತದೆ. ಕೋಟೂರ್ ಉತ್ತರ ಕರ್ನಾಟಕದ ಬಾಗಲಕೋಟೆಯವರೆಂಬುದು ನಮಗೆ ಮತ್ತಷ್ಟು ಹೆಮ್ಮೆಯ ಸಂಗತಿ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಿಎಂಐಟಿ ಆಡಳಿತ ಮಂಡಳಿ ಸಭೆಯಲ್ಲಿ ಈಚೆಗೆ ಅವರೊಂದಿಗೆ ಭಾಗವಹಿಸಿದ್ದೆ. ಈಗಿನ ಶಿಕ್ಷಣ ವ್ಯವಸ್ಥೆ, ನೂತನ ಶಿಕ್ಷಣ ನೀತಿ, ತಾಂತ್ರಿಕ ಶಿಕ್ಷಣದ ಹೊಸ ಸವಾಲುಗಳು, ಪರಿಹಾರಗಳು, ಉದ್ಯಮ-ಶಿಕ್ಷಣ ಸಂಸ್ಥೆಗಳ ಬಾಂಧವ್ಯ ಕುರಿತಾದ ವಿಶಿಷ್ಟ ಒಳನೋಟಗಳನ್ನು ಅವರು ಸಭೆಯಲ್ಲಿ ಚರ್ಚಿಸಿದರು.

-ಪ್ರೊ. ಎಸ್ ಎಂ ಶಶಿಧರ
ಪ್ರಾಚಾರ್ಯರು
ಪಿಡಿಐಟಿ, ಹೊಸಪೇಟೆ
*****

One thought on “ವ್ಯಕ್ತಿ ವಿಶೇಷ-೦೧ ಬಹುಮುಖ ಪ್ರತಿಭೆ ಪಿ ಬಿ ಕೋಟೂರು, ಪರಿಚಯ ಬರಹ: ಪ್ರೊ. ಎಸ್ ಎಂ ಶಶಿಧರ್, ಹೊಸಪೇಟೆ

Comments are closed.