ರಾಜ್ಯದ 31 ನೇ ಜಿಲ್ಲೆ ವಿಜಯನಗರಕ್ಕೆ ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತ ಚಾಲನೆ

(ಸಿ.ಮಂಜುನಾಥ್)
ಹೊಸಪೇಟೆ(ವಿಜಯನಗರ) ಅ.2: ನೂತನ ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು,ಇಂದು (ಶನಿವಾರ) ಸಂಜೆ ರಾಜ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡುವರು.
ಅವಿಭಜಿತ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ದಶಕಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಜಿಲ್ಲೆ ಇಂದು ಅಧಿಕೃತವಾಗಿ ಉದಯವಾಗಲಿದೆ.


ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತಲೆ ಎತ್ತಿರುವ ಹಂಪಿಯಗೋಪುರ, ಸ್ಮಾರಕಗಳ ಪ್ರತಿಕೃತಿಯ ಬೃಹತ್ ವೇದಿಕೆಯಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಸಂಭ್ರಮ ಮನೆ ಮಾಡಲಿದೆ.
ಸುಮಾರು 464 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಶಂಕುಸ್ಥಾಪನೆ ನೇರವೇರುವುದರ ಮೂಲಕ ಜಿಲ್ಲೆಯ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯಲಾಗುತ್ತಿದೆ.
ಬೃಹತ್ ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗಳು ಅಂತಿಮ ಹಂತದಲ್ಲಿವೆ.
ಪ್ರಧಾನ ವೇದಿಕೆಗೆ ವಿದ್ಯಾರಣ್ಯರ ಹೆಸರಿಡಲಾಗಿದ್ದು, 180×70 ಅಡಿ ಬ್ಯಾಕ್‍ಡ್ರಾಪ್‍ ಇದೆ. ಮಳೆ,ಗಾಳಿ ಮತ್ತು ಬೆಂಕಿ ತಗುಲಿದರೂ ಏನು ಆಗದ ಜರ್ಮನ್ ತಂತ್ರಜ್ಞಾನ ಹೊಂದಿರುವ ಮೇಲು ಹೊದಿಕೆಯನ್ನು ಹಾಕಲಾಗಿದೆ. ವೇದಿಕೆ ಹಿಂಭಾಗ ವಿರೂಪಾಕ್ಷ ಗೋಪುರ, ಕಲ್ಲಿನರಥ ಮತ್ತು ಉಗ್ರನರಸಿಂಹ ವಿನ್ಯಾಸ ಸಿದ್ದಪಡಿಸಲಾಗಿದೆ.
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ
ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿಜಯನಗರ ಜಿಲ್ಲೆಯ ಹೋರಾಟಕ್ಕೆ ಕೈಜೋಡಿಸಿದ ಈ ಭಾಗದ ಮಠಾಧೀಶರು ಸೇರಿದಂತೆ ನಾಡಿನ ವಿವಿಧ ಮಠಾಧೀಶರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ವಿವಿಧ ಇಲಾಖೆಗಳ ಸಚಿವರು, ಸಂಸದರು ಮತ್ತು ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಜನ ಪ್ರತಿನಿಧಿಗಳು ಆಗಮಿಸಲಿದ್ದಾರೆ.
ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮವನ್ನು ಅತ್ಯಂತ ಸ್ಮರಣೀಯವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ವೈಭೋವಪೇರಿತವಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ವಿಜಯನಗರ ಜಿಲ್ಲೆಯ ಉದ್ಘಾಟನೆಯ ಜೊತೆಗೆ ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗುವುದಕ್ಕೊಸ್ಕರ ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಜ್ಯದ ಇತರೆಡೆ ಇರುವ ಪ್ರವಾಸಿ ಸ್ಥಳಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚುರಪಡಿಸುವ ಉದ್ದೇಶದ ಹೊಂದಲಾಗಿದೆ ಎಂಬುದು ಸಚಿವ ಆನಂದಸಿಂಗ್ ಅವರ ಮಾತು.
ಶನಿವಾರ ಬೆಳಿಗ್ಗೆ ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜ್ಯೋತಿಗಳನ್ನು ಹೊತ್ತುತರಲಾಗುತ್ತಿದ್ದು, ನಗರದ ಧ್ವಜದ ಕಟ್ಟೆ ಮುಂಭಾಗ(ಶಾನ್‍ಬೋಗ ವೃತ್ತ)ದಲ್ಲಿ ನಿರ್ಮಿಸಲಾಗಿರುವ ಕುಂಡದಲ್ಲಿ ಜ್ಯೋತಿ ಪ್ರಜ್ವಲಿಸಲಾಗುತ್ತದೆ.
ವಿಜಯನಗರ ವೈಭವದಲ್ಲಿ 80 ಕಲಾತಂಡಗಳು ಭಾಗಿ: ಅ.2ರಂದು ಸಂಜೆ 4ಕ್ಕೆ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ವಿಜಯನಗರ ವೈಭವ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಲಿದೆ. ಸ್ಥಳೀಯ ಕಲಾವಿದರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ 80 ಕಲಾತಂಡಗಳ ಕಲಾವಿದರು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.
ಪೂಜಾಕುಣಿತ, ಪಟಕುಣಿತ, ಗೊಂಬೆಕುಣಿತ, ಚಿಟ್ಟೆ ಮೇಳ, ಚಂಡಿವಾದ್ಯ, ಮಹಿಳಾ ಕಾಳಿ ಕುಣಿತ, ಮಹಿಳಾ ವೀರಗಾಸೆ, ನಗಾರಿ ವಾದ್ಯ, ಕಂಸಾಳೆ, ಜಗ್ಗಲಗಿ ಕುಣಿತ, ಡೊಳ್ಳು ಕುಣಿತ, ಕರಡಿ ಮಜಲು, ಹುಲಿವೇಷ, ಝಾಂಜ್ ಮೇಳ, ನವಿಲು ಕುಣಿತ, ತಾಷರಂಡೋಲ್, ಹಲಗೆ ವಾದನ, ವೀರಗಾಸೆ, ನಾದಸ್ವರ ವಾದನ, ಕಹಳೆ ವಾದನ, ಹಗಲುವೇಷಗಾರಿಕೆ, ಬೇಡರ ವೇಷ, ಉರುಮೆ ವಾದ್ಯ, ಕೋಲಾಟ, ಗೊರವರಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.
ಈ ಕಲಾತಂಡಗಳ ಜೊತೆಗೆ ಆಳ್ವಾಸ್ ಸಂಸ್ಥೆಯ 25 ಜನಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಿದ್ದಾರೆ. ಈ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಸಿಂಗರಿಸಿದ ನಾಡದೇವತೆ ಭುವನೇಶ್ವರಿ ಮೂರ್ತಿಯ ಹಾಗೂ ಇನ್ನೊಂದು ತೆರೆದ ವಾಹನದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯ ಮತ್ತು ಅವರ ದರ್ಬಾರ್(ಆಸ್ಥಾನ ಕವಿಗಳು),ವಿದ್ಯಾರಣ್ಯ ಶ್ರೀಗಳು ಹಾಗೂ ಇನ್ನೀತರ ಪ್ರಮುಖರ ವೇಷಧಾರಿಗಳಿರಲಿದ್ದಾರೆ.
ವಿದ್ಯಾರಣ್ಯ ವೇದಿಕೆ ಪಕ್ಕದಲ್ಲಿ 30 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಸರಕಾರದ ವಿವಿಧ ಇಲಾಖೆಗಳು ಹಾಗೂ ಸ್ವ-ಸಹಾಯ ಸಂಘ ಸಂಸ್ಥೆಗಳ ಬಳ್ಳಾರಿ ಜಿನ್ಸ್,ಇಲಕಲ್ ಸೀರೆಗಳು, ಚನ್ನಪಟ್ಟಣದ ಗೊಂಬೆಗಳು, ಕೈಮಗ್ಗಗಳಿಂದ ತಯಾರಿಸಿದ ವಸ್ತ್ರಗಳು ಹಾಗೂ ಇನ್ನಿತರ ಮಳಿಗೆಗಳಿರುತ್ತವೆ.
ವೇದಿಕೆ ಕಾರ್ಯಕ್ರಮದಲ್ಲಿ ನೂತನ ವಿಜಯನಗರ ಜಿಲ್ಲೆಯಲ್ಲಿ ಕಚೇರಿಗಳ ಸ್ಥಾಪನೆ ಕುರಿತು ಕೆಲ ಸರಕಾರಿ ಆದೇಶಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ. ಸರಕಾರಿ ಆದೇಶಗಳು ಬಿಡುಗಡೆ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಆಡಳಿತಕ್ಕೆ ಚಾಲನೆ ನೀಡಲಿದ್ದಾರೆ.


*****