ಮರುಕಳಿಸಿದ ವಿಜಯನಗರ ವೈಭವ: ನಾಡಿನ 80ಕ್ಕೂ ಹೆಚ್ಚು ಕಲಾತಂಡಗಳು ಭಾಗಿ ನಾಡಿನ ವೈವಿಧ್ಯಮಯ ಕಲೆ ಅನಾವರಣ

ಹೊಸಪೇಟೆ(ವಿಜಯನಗರ),ಅ.02: ವಿಜಯನಗರದ ನೆಲದಲ್ಲಿ ಮತ್ತೆ ಕನ್ನಡ ನಾಡಿನ ಭವ್ಯ ಪರಂಪರೆಯ ವೈಭವ ಮರುಕಳಿಸಿತು.
ಹೌದು…! ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಅಂಗವಾಗಿ ನಗರದ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ನಡೆದ ವಿಜಯನಗರ ವೈಭವ ಮೆರವಣಿಗೆಯು ನಾಡಿನ ವೈವಿಧ್ಯಮಯ ಕಲೆಯನ್ನು ಅನಾವರಣಗೊಳಿಸಿತು.
ವೈಭವದ ಮೆರವಣಿಗೆಗೆ ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಚಾಲನೆ ನೀಡಿದರು.


ಸ್ಥಳೀಯ ಕಲಾವಿದರು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ 80 ಕಲಾತಂಡಗಳ ಕಲಾವಿದರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ವಾಗಿತ್ತು.
ಪೂಜಾಕುಣಿತ, ಪಟಕುಣಿತ, ಗೊಂಬೆಕುಣಿತ, ಚಿಟ್ಟೆ ಮೇಳ, ಚಂಡಿವಾದ್ಯ, ಮಹಿಳಾ ಕಾಳಿ ಕುಣಿತ, ಮಹಿಳಾ ವೀರಗಾಸೆ, ನಗಾರಿ ವಾದ್ಯ, ಕಂಸಾಳೆ, ಜಗ್ಗಲಗಿ ಕುಣಿತ, ಡೊಳ್ಳು ಕುಣಿತ, ಕರಡಿ ಮಜಲು, ಹುಲಿವೇಷ, ಝಾಂಜ್ ಮೇಳ, ನವಿಲು ಕುಣಿತ, ತಾಷರಂಡೋಲ್, ಹಲಗೆ ವಾದನ, ವೀರಗಾಸೆ, ನಾದಸ್ವರ ವಾದನ, ಕಹಳೆ ವಾದನ, ಹಗಲುವೇಷಗಾರಿಕೆ, ಬೇಡರ ವೇಷ, ಉರುಮೆ ವಾದ್ಯ, ಕೋಲಾಟ, ಗೊರವರಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಕಲಾವಿದರು ಪ್ರದರ್ಶಿಸಿದರು.


ಈ ಕಲಾತಂಡಗಳ ಜೊತೆಗೆ ಆಳ್ವಾಸ್ ಸಂಸ್ಥೆಯ 25 ಜನಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿದರು.
ಈ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಸಿಂಗರಿಸಿದ ನಾಡದೇವತೆ ಭುವನೇಶ್ವರಿ ಮೂರ್ತಿ, ಮತ್ತೊಂದು ತೆರೆದ ವಾಹನದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸ ಶ್ರೀಕೃಷ್ಣದೇವರಾಯ ಮತ್ತು ಅವರ ದರ್ಬಾರ್(ಆಸ್ಥಾನ ಕವಿಗಳು),ವಿದ್ಯಾರಣ್ಯ ಶ್ರೀಗಳು ಹಾಗೂ ಇನ್ನಿತರ ಪ್ರಮುಖರ ವೇಷಧಾರಿಗಳು ಗಮನಸೆಳದರು.
*****