(ಸಿ.ಮಂಜುನಾಥ್)
ಹೊಸಪೇಟೆ(ವಿಜಯನಗರ), ಅ.2: ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಂಟಿಯಾಗಿ ಸುಮಾರು 640ಕೋಟಿ ರೂ. ವೆಚ್ಚದಲ್ಲಿ ಈ ಭಾಗದ ಪ್ರವಾಸೋದ್ಯಮದ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಭವ್ಯ ವಿದ್ಯಾರಣ್ಯ ವೇದಿಕೆಯಲ್ಲಿ ನೂತನ ವಿಜಯನಗರ ಜಿಲ್ಲೆಯನ್ನು ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ವಿಜಯನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಭಿವೃದ್ಧಿ ಪರ್ವ ಆರಂಭವಾಗಿದೆ. ನಿರಂತರವಾಗಿ ನಡೆಯುತ್ತಿದೆ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಹೆಲಿ ಟ್ಯೂರಿಸಂಗೆ ಒತ್ತು ನೀಡಲಾಗುವುದು. ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯ ಮಣ್ಣಿನ ಗುಣವೇ ಹೋರಾಟದ ಕಿಚ್ಚನ್ನು ಹಚ್ಚುವಂತಹುದು ಹಾಗೂ ತುಂಗಭದ್ರೆಯ ಹನಿ ಹನಿಯಲ್ಲೂ ಭಕ್ತಿಭಾವ ಹರಿಯುತ್ತಿದೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ, ಈ ಭಾಗದ ಜನರ, ಸಂಘ ಸಂಸ್ಥೆಗಳ ಅನೇಕ ವರ್ಷಗಳ ಹೋರಾಟ, ಚಳವಳಿ ಪರಿಣಾಮದಿಂದ ವಿಜಯನಗರ ನೂತನ ಜಿಲ್ಲೆ ಮೈದಾಳಿದೆ ಎಂದು ಹೇಳಿದರು.
ವಿಜಯನಗರ ಜಿಲ್ಲೆಗಾಗಿ ಸಚಿವ ಆನಂದ್ ಸಿಂಗ್ ಅವರು ತಮ್ಮ ರಾಜಕೀಯ ಜೀವನವನ್ನೇ ಪಣಕ್ಕಿಟ್ಟು ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ನೂತನ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯ ಮಂತ್ರಿಗಳು, ಸಂಪುಟದ ಎಲ್ಲಾ ಸಚಿವರು ಆನಂದಸಿಂಗ್ ಅವರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಬಳ್ಳಾರಿ ಜಿಲ್ಲೆ ವಿಭಜನೆಯಾಗಿದ್ದರೂ ಎರಡು ಜಿಲ್ಲೆಗಳ ಜನರ ಹೃದಯ ಆತ್ಮ ಒಂದೇ. ಅವಳಿ ಜಿಲ್ಲೆಯ ಎಲ್ಲರೂ ಅಣ್ಣ ತಮ್ಮಂದಿರಂತೆ ಇರುತ್ತಾರೆ ಎಂದರು.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಅಶ್ವತ್ಥನಾರಾಯಣ, ಸಿ.ಸಿ ಪಾಟೀಲ್, ಗೋವಿಂದ ಕಾರಜೋಳ, ಎನ್.ಮುನಿರತ್ನ, ಗೋಪಾಲಯ್ಯ, ಭೈರತಿ ಬಸವರಾಜ, ಸುನೀಲ್ ಕುಮಾರ್, ಸಂಸದರಾದ ವೈ.ದೇವೆಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಕೆ ಸಿ ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶಶಿಲ್ ನಮೋಷಿ, ಎನ್.ವೈ ಗೋಪಾಲಕೃಷ್ಣ, ಪಿ.ಟಿ ಪರಮೇಶ್ ನಾಯ್ಕ, ಚಿತ್ರನಟಿ ತಾರಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನೂತನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಸ್ವಾಗತಿಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ವಂದಿಸಿದರು.
- *****