ಅನುದಿನ ಕವನ-೨೭೪, ಕವಿ:ನಾಗೇಶ್ ಜೆ. ನಾಯಕ, ಸೌದತ್ತಿ, ಕಾವ್ಯ ಪ್ರಾಕಾರ:ಗಜಲ್

ಗಜ಼ಲ್

ಇದು ಸ್ವಾರ್ಥಿಗಳೇ ತುಂಬಿದ ಲೋಕ ಯಾರನ್ನೂ ಅತಿಯಾಗಿ ನಂಬದಿರು
ಇದು ಬೆನ್ನಿಗೆ ತಣ್ಣಗೆ ಇರಿಯುವವರ ಜಗತ್ತು ಮರೆತು ವಿಶ್ವಾಸ ಇಡದಿರು

ಹೆಜ್ಜೆ ಹೆಜ್ಜೆಗೂ ಬಣ್ಣದ ಮಾತುಗಳಾಡಿ ಮರುಳು ಮಾಡುವವರೇ ಇದಿರಾಗುತ್ತಾರೆ
ಇದು ಕ್ಷಣ ಕ್ಷಣ ಬಣ್ಣ ಬದಲಿಸುವ ಗೋಸುಂಬೆಗಳ ದುನಿಯಾ ಮೋಸ ಹೋಗದಿರು

ಮಾತಿಗೂ ಕೃತಿಗೂ ಇಲ್ಲಿ ಅಜಗಜಾಂತರ ಸ್ವಲ್ಪ ಯಾಮಾರಿದರೂ ಹಳ್ಳ ತೋಡುವವರೇ ಬಹಳ
ಇದು ನಿಯತ್ತಿಲ್ಲದವರ ನೆತ್ತಿ ಕಾಯುವ ಬಹುಪರಾಕ್ ಹೇಳುವ ಜಮಾನಾ ಎಚ್ಚರವಾಗಿರು

ಎಲ್ಲ ಸಂಬಂಧಗಳೂ ದುಡ್ಡಿನ ಹಿಂದೆಯೇ ಬೀಳುತ್ತವೆ ಪ್ರೀತಿಗಿಲ್ಲಿ ಅರ್ಧಚಂದ್ರ
ಇದು ಸತ್ಯದ ತಲೆ ಮೇಲೆ ಹೊಡೆಯುವ ನಟಚತುರರ ನೌಟಂಕಿ ನೆಲ ಮರೆಯದಿರು

ಉಂಡೆಲೆಯಂತೆ ಬಳಸಿ ಬಿಸಾಡುವ ಉಪಕಾರಗೇಡಿಗಳಿಂದ ಬದುಕ ಜಪ್ಪಿಸಬೇಕು ‘ನಾಗೇಶಿ’
ಇದು ಕೆಡುಕನ್ನೇ ಹಂಬಲಿಸುವ ಕಿರಾತಕರ ಕೂಟ ನಿನ್ನಾತ್ಮಸಾಕ್ಷಿ ಎಂದಿಗೂ ಬಿಡದಿರು

-ನಾಗೇಶ್ ಜೆ. ನಾಯಕ, ಸೌದತ್ತಿ


*****