ಹೊಸಪೇಟೆ(ವಿಜಯನಗರ),ಅ.03: ನೂತನ ವಿಜಯನಗರ ಜಿಲ್ಲಾ ಉತ್ಸವದ ಸಂಭ್ರಮದಲ್ಲಿ ರೈತರ ಸಂಕೇತವಾಗಿರುವ ಎತ್ತಿನಬಂಡಿಯ ಮೆರವಣಿಗೆಯನ್ನು ಉತ್ಸವದ ರೀತಿ ಆಚರಿಸುತ್ತಿರುವುದು ರೈತ ಸಮುದಾಯದ ಖುಷಿಯನ್ನು ಇಮ್ಮಡಿಗೊಳಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದರು.
ವಿಜಯನಗರ ಜಿಲ್ಲಾ ಉತ್ಸವ ಹಾಗೂ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ಹೊಸಪೇಟೆ ನಗರದ ಎಪಿಎಂಸಿ ಆವರಣ ಮುಂಭಾಗ ಭಾನುವಾರ ಸಂಜೆ ಆಯೋಜಿಸಿದ್ದ ಎತ್ತಿನಬಂಡಿಗಳ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ರಾಜ್ಯದ ಮೂವತ್ತೊಂದನೇ ಜಿಲ್ಲೆಯಾಗಿ ಉದಯವಾಗಿರುವ ವಿಜಯನಗರ ತನ್ನ ಐತಿಹಾಸಿಕ ಪ್ರಾಶಸ್ತ್ಯವನ್ನು ಪುನಃ ಪಡೆಯಲಿ. ಜಿಲ್ಲೆಯ ಉದ್ಘಾಟನೆ ಸವಿ ನೆನಪಿನಲ್ಲಿ ರೈತ ಸಮುದಾಯದ ಕುರಿತು ವಿಶೇಷ ಒಲವು ತೋರಿಸಿ ಎತ್ತಿನ ಬಂಡಿಗಳ ಮೆರವಣಿಗೆ ಏರ್ಪಡಿಸಿರುವುದು ರೈತ ಬಾಂಧವರಲ್ಲಿ ಸಂತಸ ತಂದಿದೆ. ಈ ಮೆರವಣಿಗೆ ಮುಂದೆ ಇಂತಹ ಹಲವು ಕಾರ್ಯಕ್ರಮಗಳ ಆಯೋಜನೆಗೆ ಸಹಕಾರಿಯಾಗಲಿದೆ ಎಂದರು.
ಜಿಲ್ಲೆಯು ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ ಸೇರಿದಂತೆ ಹಲವು ಭಾಗಗಳಲ್ಲಿ ಅಭಿವೃದ್ಧಿ ಹೊಂದಲಿದೆ. ನೂತನ ಜಿಲ್ಲೆಯ ರಚನೆಗೆ ಶ್ರಮಿಸಿದ ಸ್ನೇಹಿತ ಆನಂದ್ ಸಿಂಗ್ ಅವರ ಕಾರ್ಯ ಶ್ಲಾಘನೀಯ ಎಂದರು.
ಮೆರವಣಿಗೆ: 101 ಎತ್ತಿನ ಜೋಡಿಗಳ ಮೆರವಣಿಗೆ ಎಪಿಎಂಸಿ ಆವರಣದಿಂದ ಆರಂಭವಾಗಿ, ವಾಲ್ಮೀಕಿ ಸರ್ಕಲ್, ಉದ್ಯೋಗ್ ಪ್ರಟ್ರೋಲ್ ಬಂಕ್, ಗಾಂಧಿ ಚೌಕ್, ಮೂರಂಗಡಿ ಸರ್ಕಲ್, ಶಾನಭಾಗ ಸರ್ಕಲ್,
ಅಂಬೇಡ್ಕರ್ ಸರ್ಕಲ್ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಪಾಲನ್ನ, ಬಳ್ಳಾರಿ ಎಪಿಎಂಸಿ ಅಧ್ಯಕ್ಷ ಉಮೇಶ್ ಕುಮಾರ್, ಉಪಕೃಷಿ ನಿರ್ದೇಶಕ ಸಿ.ಆರ್.ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶಂಕರ್ ಜೆ., ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಸವರಾಜ ಬೆಣ್ಣಿ ಮತ್ತಿತರರು ಇದ್ದರು.
ಹೂವಿನ ಅಲಂಕಾರ: ಹೂವಿನ ಅಲಂಕಾರದಿಂದ ಸಿಂಗಾರಗೊಂಡ ಎತ್ತುಗಳು, ವಿವಿಧ ಬಣ್ಣಗಳಿಂದ ಅಲಂಕಾರ ಗೊಂಡಿದ್ದ ಎತ್ತಿನ ಬಂಡಿಗಳು, ತಲೆಗೆ ಪೇಟ ಸುತ್ತಿಕೊಂಡು ಬಂಡಿ ಓಡಿಸುವ ರೈತ ಅಸಂಖ್ಯಾತ ನೋಡುಗರನ್ನು ತನ್ನತ್ತ ಸೆಳೆದರೆ,ಮಲಪನಗುಡಿಯ ರೈತ ಶಂಕರ್ ಅವರು ತಯಾರಿಸಿದ ಹಂಪಿಯ ಜಾತ್ರೆಯ ಚಿತ್ರಣ, ಹೊಸಪೇಟೆ ತಳವಾರಕೆರೆ ತಳವಾರ ಹುಲುಗುಪ್ಪ ಅವರ ವಿರೂಪಾಕ್ಷಿ ದೇವಸ್ಥಾನದ ಜೊತೆಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಹಾಗೂ ಅಕ್ಕಡಿ ಬೆಳೆಯ ಮಾಹಿತಿ, ಮಿಶ್ರ ಬೆಳೆಯಿಂದ ಆಗುವ ಲಾಭಗಳ ಕುರಿತು ಮಾಹಿತಿ ಹೊತ್ತು ತಂದಿದ್ದ ಎತ್ತಿನ ಬಂಡಿ ನೋಡುಗರ ಗಮನ ಸೆಳೆದವು.
*****