ಬಳ್ಳಾರಿ, ಅ.04: ಸಂವಿಧಾನದಲ್ಲಿ ಮಂಗಳಮುಖಿಯರಿಗೆ ಎಲ್ಲರಂತೆ ಸಮಾನ ಹಕ್ಕುಗಳು ಮತ್ತು ಸೌಲಭ್ಯಗಳಿವೆ ಎಂದು ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ದೊಡ್ಡಮನಿ ಅವರು ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಸೋಮವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನುಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಏರ್ಪಡಿಸಿದ್ದ ಮಂಗಳಮುಖಿಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಅವಕಾಶ ನೀಡಿದಂತೆ ಮಂಗಳಮುಖಿಯರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮಂಗಳಮುಖಿಯರಿಗೆ ಕಾನೂನಡಿ ಸಿಗುವ ಸೌಲಭ್ಯಗಳು ಮತ್ತು ಆಡಚಣೆ ಉಂಟು ಮಾಡಿದರೆ ಕಾನೂನಿನ ಅಡಿ ಇರುವ ಶಿಕ್ಷಾ ಕ್ರಮಗಳ ಕುರಿತು ನ್ಯಾ. ದೊಡ್ಡಮನಿ ಅವರು ನೆರೆದಿದ್ದ ಮಂಗಳಮುಖಿಯರಿಗೆ ಅರಿವು ಮೂಡಿಸಿದರು.
2019ರ ಕಾಯ್ದೆ ಅಡಿ ಮಂಗಳಮುಖಿಯರಿಗೆ ಸಿಗುವ ಸೌಲಭ್ಯಗಳು ಹಾಗೂ ಸರಕಾರದ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ಜಿಲ್ಲಾ ಕಾನೂನುಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಡಿ.ಪವಿತ್ರಾ ಅವರು ಕಾನೂನುಸೇವಾ ಪ್ರಾಧಿಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು.
ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷ ಯರ್ರೇಗೌಡ ಹಾಗೂ ವಕೀಲ ಯರ್ರಿಸ್ವಾಮಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಗತಿ ಸದಾಸೇವಾ ಸಂಘದ ಅಧ್ಯಕ್ಷೆ ಫರ್ವಿನ್ ಭಾನು, ಉಪಾಧ್ಯಕ್ಷ ಗಂಗಣ್ಣ ಹಾಗೂ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಮಂಗಳಮುಖಿಯರ ಆರೋಗ್ಯ ತಪಾಸಿಸಲಾಯಿತು.
*****