ಅನುದಿನ ಕವನ-೨೭೭, ಕವಿ: ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಚಮತ್ಕಾರ…!

“ಇದು ಒಲವಿನ ಪದಾಮೋದಗಳ ಸುಂದರ ಕವಿತೆ. ಅನುರಾಗದ ಸ್ವರರಿಂಗಣಗಳ ಮಧುರ ಭಾವಗೀತೆ. ಓದಿ ನೋಡಿ.. ಆಳಕ್ಕಿಳಿದಷ್ಟೂ ಸೌಂದರ್ಯವಿದೆ. ಅರ್ಥೈಸಿದಷ್ಟೂ ಮಾಧುರ್ಯವಿದೆ. ಏನಂತೀರಾ..?”                                   – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಚಮತ್ಕಾರ..!

ಪದ್ಯವಾಗು ಎಂದರೆ
ನೀ ಹೃದ್ಯವಾಗಿಬಿಟ್ಟೆ.!
ಭಾವವಾಗು ಎಂದರೆ
ನೀ ಜೀವವಾಗಿಬಿಟ್ಟೆ.!

ಕವಿತೆಯಾಗು ಎಂದರೆ
ನೀ ಕಾವ್ಯವಾಗಿಬಿಟ್ಟೆ.!
ಚಿತ್ತಾರವಾಗು ಎಂದರೆ
ನೀ ಚೈತನ್ಯವಾಗಿಬಿಟ್ಟೆ.!

ಭಾಷ್ಯವಾಗು ಎಂದರೆ
ನೀ ಬದುಕಾಗಿಬಿಟ್ಟೆ.!
ಬಣ್ಣನೆಯಾಗು ಎಂದರೆ
ನೀ ಬೆಳಕಾಗಿಬಿಟ್ಟೆ.!

ಲೇಖನಿಯ ತುಂಬೆಲ್ಲಾ
ನಿನ್ನದೇ ಮಾಯೆ.!
ಶಾಯಿಯ ಹರಿವಲ್ಲು
ನಿನ್ನದೇ ಛಾಯೆ.!

ಪ್ರತಿಪದ ಶಬ್ದಗಳಲೂ
ನಿನ್ನ ಕಲ್ಪನಾವಿಲಾಸ.!
ಪ್ರತಿಸಾಲು ಸಾಲಿಗೂ
ನೀನೇ ನವೋಲ್ಲಾಸ.!

ನೀನೊಂದು ಅಕ್ಷರಾತೀತ
ಅಪೂರ್ವ ಚಮತ್ಕಾರ.!
ನೀನೊಂದು ವರ್ಣನಾತೀತ
ಜೀವಕಾವ್ಯ ಝೇಂಕಾರ.!

-ಎ.ಎನ್.ರಮೇಶ್. ಗುಬ್ಬಿ.
*****